ಮಾನವ -ವನ್ಯಜೀವಿ ಸಂಘರ್ಷ ತಪ್ಪಿಸಲು ಹೊಸ ಪ್ರಯೋಗ 
ರಾಜ್ಯ

ಸಂಪಾದಕೀಯ: ನೆಮ್ಮದಿಯ ಜೀವನ ಸಿಗಲಿ

ಸಂಪಾದಕೀಯ: ಮಾನವ ಮತ್ತು ವನ್ಯಜಿವಿಗಳ ಸಂರ್ಘರ್ಷ ಈಚಿನ ವರ್ಷಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸರ್ಕಾರಗಳು ಪರಿಹಾರಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆಯಾದರೂ ಪೂರ್ಣವಿರಾಮ ಹಾಕಲು ಸಾಧ್ಯವಾಗುತ್ತಿಲ್ಲ. ವನ್ಯಪ್ರಾಣಿ ದಾಳಿಯಿಂದಾಗಿ ಜೀವಹಾನಿಯಾಗುವ ಘಟನೆಗಳು ವರದಿಯಾಗುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಹೆಚ್ಚಿಸಿದೆ. ಈ ವಿಷಯವು ಸಂಕೀರ್ಣವಾಗಿದ್ದು, ಅನೇಕ ಆಯಾಮಗಳನ್ನು ಹೊಂದಿದೆ. ಹೀಗಾಗಿ ಬಲು ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಕರ್ನಾಟಕ ಸರ್ಕಾರ ಇದೀಗ ಈ ನಿಟ್ಟಿನಲ್ಲಿ ಹೊಸ ಪ್ರಯೋಗ ಕೈಗೊಂಡಿರುವುದು ಗಮನ ಸೆಳೆಯುವಂತಿದೆ. ವನ್ಯಪ್ರಾಣಿಗಳ ಚಲನವಲನ ಗಮನಿಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಎಐ ಕ್ಯಾಮರಾ ಮತ್ತು ಕ್ಯಾಮರಾ ಟ್ರ್ಯಾಪ್​ ಅಳವಡಿಸಿ ನಿಗಾ ವಹಿಸುವುದು ಈ ಯೋಜನೆಯ ಒಟ್ಟಾರೆ ತಿರುಳು. ಕಾಡಂಚಿನ ಪ್ರದೇಶಗಳಲ್ಲಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿ ಗಡಿರೇಖೆಗಳಲ್ಲಿ ಗಸ್ತು ನಿರ್ವಹಿಸುವುದು ಕೂಡ ಅರಣ್ಯ ಇಲಾಖೆಯ ಆಲೋಚನೆಯಾಗಿದೆ.
ಇದರ ಜತೆಗೆ, ವನ್ಯಜೀವಿಗಳ ಇರುವಿಕೆ ಬಗ್ಗೆ ಸ್ಥಳಿಯರಿಗೆ ಮಾಹಿತಿ ನೀಡಿ ಜಾಗರೂಕರಾಗಿರಲು ಸೂಚಿಸಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಕೂಡ ಇದರಲ್ಲಿ ಸೇರಿದೆ. ಮಾನವ ಮತ್ತು ಪ್ರಾಣಿಗಳ ಸಂರ್ಷಕ್ಕೆ ಕಾರಣವಾಗುವ ಸಾಧ್ಯತೆ ಇರುವ ಅಥವಾ ತೊಡಗಿರುವ ವನ್ಯಜೀವಿಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಎಐ ಕ್ಯಾಮರಾ ಬಳಸಲಾಗುತ್ತದೆ. ಮಾನವ&ಆನೆ ಸಂಘರ್ಷ ಹೆಚ್ಚಿರುವ 10 ಜಿಲ್ಲೆಗಳಲ್ಲಿ "ಆನೆ ಎಲ್ಲಿ' ಎಂಬ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ಬಂದಿದ್ದು, ನಿರ್ದಿಷ್ಟ ಪ್ರದೇಶದಲ್ಲಿ ಆನೆಗಳ ಚಲನವಲನ ಗಮನಿಸುತ್ತದೆ. ಲಭ್ಯವಾಗುವ ಮಾಹಿತಿ ವಿಶ್ಲೇಷಿಸಲು ಸಂಯೋಜಿತ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿರುವ ಸಿಬ್ಬಂದಿ ಎಐ ಕ್ಯಾಮರಾದಿಂದ ಬರುವ ಸಂದೇಶ ಪಡೆದು ಸೂಕ್ತ ಕ್ರಮಗಳನ್ನು ಯೋಜಿಸಲಿದ್ದಾರೆ.
ಪ್ರಾಣಿಗಳನ್ನು ಗುರುತಿಸಿ ಅದರ ಧ್ವನಿಯಂತೆ ಸದ್ದು ಮಾಡಿ ವಾಪಸ್​ ಅರಣ್ಯಕ್ಕೆ ಓಡಿಸುವ ಪ್ರಯತ್ನವನ್ನೂ ಎಐ ಕ್ಯಾಮರಾ ಮೂಲಕ ನಡೆಸುವುದು ವಿಶೇಷ. ಮಾನವ&ವನ್ಯಪ್ರಾಣಿ ಸಂರ್ಷದ ಮೂಲವನ್ನು ಕಂಡುಕೊಂಡು ಅದಕ್ಕೆ ತಕ್ಕಂತೆ ಪರಿಹಾರಾತ್ಮಕ ಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ವನ್ಯಜಿವಿಗಳ ಆವಾಸಸ್ಥಾನ ಅಭಿವೃದ್ಧಿ ಮತ್ತು ಕಾಡಿನಲ್ಲಿ ನೀರಿನ ಲಭ್ಯತೆ ಹೆಚ್ಚಿಸಲು ಕೆಲವೆಡೆ ಕೆರೆ ನಿರ್ಮಾಣ ಮಾಡುವ ಇಲಾಖೆಯ ಆಲೋಚನೆ ಸೂಕ್ತವಾದುದು. ಏಕೆಂದರೆ, ಆವಾಸಸ್ಥಾನದಲ್ಲಿ ಸಮಸ್ಯೆ ಉಂಟಾದಾಗ ಪ್ರಾಣಿಗಳು ಅನ್ಯ ಜಾಗಕ್ಕೆ ಲಗ್ಗೆಯಿಡುವುದು ಸಾಮಾನ್ಯ. ಅರಣ್ಯದಲ್ಲಿ ವಾಸಿಸುತ್ತಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಿ, ಪರಿಹಾರ ನೀಡುವುದಕ್ಕೆ ಎಷ್ಟು ಹಣ ಬೇಕಾದೀತೆಂಬ ಅಂದಾಜು ಹಾಕಲು ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇದು ಹೇಗೆ ಕಾರ್ಯರೂಪಕ್ಕೆ ಬರುತ್ತೆಂಬುದನ್ನು ಕಾದುನೋಡಬೇಕಿದೆ. ಏಕೆಂದರೆ, ಎಷ್ಟೋ ವರ್ಷಗಳಿಂದ ಕಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದು, ಈಗ ಬೇರೆಡೆಗೆ ಹೋಗಿ ಪುನಃ ಜೀವನ ರೂಪಿಸಿಕೊಳ್ಳಲು ಸಾಧ್ಯವೇ? ಎಂಬುದು ಅನೇಕರ ಪ್ರಶ್ನೆ.
ಇದಲ್ಲದೆ, ಸರ್ಕಾರ ಎಷ್ಟು ಅಂತ ಪರಿಹಾರ ನೀಡಲು ಸಾಧ್ಯ? ಹಾಗೆ ಕೊಡುವ ಪರಿಹಾರದಿಂದ ಜೀವನ ಸಾಗಿಸಲು ಆದೀತೆ ಎಂಬ ಪ್ರಶ್ನೆಯೂ ಇದೆ. ಒಟ್ಟಿನಲ್ಲಿ ಇದೊಂದು ಜಟಿಲ ಸನ್ನಿವೇಶವಾಗಿದ್ದು, ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕಿದೆ. ಜನರ ಪ್ರಾಣ, ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಜತೆಗೆ, ವನ್ಯಪ್ರಾಣಿಗಳ ಬದುಕುವ ಹಕ್ಕನ್ನೂ ಕಾಪಾಡುವ ದೊಡ್ಡ ಸವಾಲು ಎದುರಿಗಿದೆ. ವಿವೇಚನಾಯುಕ್ತ, ಮಾನವೀಯ ನೆಲೆಯಲ್ಲಿ ಪರಿಹಾರೋಪಾಯಗಳು ಮೂಡಿಬರಬೇಕಿದೆ.