ಈಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ವಲಯವು ವೇಗದ ಬೆಳವಣಿಗೆ ಕಂಡಿದೆ. ಜನರ ಬದಲಾದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ, ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳು ಇತ್ಯಾದಿ ಇದಕ್ಕೆ ಕಾರಣ. ಕೆಲ ರಾಜ್ಯಗಳು ನಿಸರ್ಗಶ್ರೀಮಂತಿಕೆ ಹೊಂದಿದ್ದು, ಅಂಥಲ್ಲಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಹೆಚ್ಚು. ಅಂತಹ ನೈಸರ್ಗಿಕ ನೆಲೆಬೀಡುಗಳಲ್ಲಿ ನಮ್ಮ ಕರ್ನಾಟಕ ಕೂಡ ಮುಂಚೂಣಿಯಲ್ಲಿದೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ, ಕರಾವಳಿ ಹೀಗೆ ವೈವಿಧ್ಯಮಯ ಭೂಪ್ರದೇಶಗಳನ್ನು ಹೊಂದಿರುವ ಹಾಗೂ ಇತರ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಕರ್ನಾಟಕಕ್ಕೆ ದೇಶವಿದೇಶಗಳ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಹೋಂ ಸ್ಟೇಗಳು ಸಹ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ. ರಾಜ್ಯ ಸರ್ಕಾರವು ಹೋಂ ಸ್ಟೇಗಳ ನೋಂದಣಿಯನ್ನು ಕಡ್ಡಾಯಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. "ಪ್ರವಾಸಿಗರಲ್ಲಿ ವಿಶ್ವಾಸ, ಸುರಕ್ಷತೆ ಹೆಚ್ಚಿಸುವಲ್ಲಿ, ತನ್ಮೂಲಕ ಪ್ರವಾಸೋದ್ಯಮ ರಂಗಕ್ಕೆ ಮತ್ತಷ್ಟು ಬಲತುಂಬುವಲ್ಲಿ ಈ ಕ್ರಮ ನೆರವಾಗುತ್ತದೆ" ಎಂದು ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆಯು ಈ ಕುರಿತ ಮಾರ್ಗಸೂಚಿ ಹೊರಡಿಸಿದ ನಂತರದಲ್ಲಿ ಈವರೆಗೆ 500ಕ್ಕೂ ಹೆಚ್ಚು ಹೋಂ ಸ್ಟೇ ಮಾಲೀಕರು ಅಧಿಕೃತ ನೋಂದಣಿಗೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ 400 ಅರ್ಜಿಗಳ ದಾಖಲಾತಿ ಪರಿಶೀಲನೆ ಮುಗಿದಿದ್ದು, ಸ್ಥಳ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪಂಚಾಯತ್/ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಒಳಗೊಂಡ ತಂಡವು ಅರ್ಜಿಗಳನ್ನು ಪರಿಶೀಲಿಸಿದ ಬಳಿಕವೇ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ನೋಂದಾಯಿತ ಹೋಂ ಸ್ಟೇಗಳು ಸರ್ಕಾರದ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ನಿಗದಿತ ಮಾನದಂಡ ಪೂರೈಸದ ಹೋಂ ಸ್ಟೇಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪ್ರವಾಸಿಗರಿಗೆ ಮನೆಯ ವಾತಾವರಣದ ಅನುಭವ ನೀಡುವ ವ್ಯವಸ್ಥೆ ಕಲ್ಪಿಸುವಲ್ಲಿ ಹೋಂ ಸ್ಟೇಗಳು ಮುಖ್ಯ ಪಾತ್ರ ನಿಭಾಯಿಸುತ್ತವೆ. ಇವು ಆದಾಯದ ಮೂಲವೂ ಆಗಿವೆ. ಹೀಗಾಗಿ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಂ ಸ್ಟೇಗಳು ತಲೆಯೆತ್ತಿವೆ; ತಲೆಯೆತ್ತುತ್ತಿವೆ. ಆದರೆ ಕೆಲವೆಡೆಗಳಲ್ಲಿ ಅನಪೇಕ್ಷಿತ ಘಟನೆಗಳು ಸಹ ನಡೆದಿರುವುದು ಖೇದಕರ. ಹಾಗಂತ ಎಲ್ಲೋ ಕೆಲ ಘಟನೆಗಳನ್ನು ಮುಂದಿಟ್ಟುಕೊಂಡು ಇಡೀ ವ್ಯವಸ್ಥೆಯನ್ನು ದೂಷಿಸುವುದು ತರವಲ್ಲ. ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರಿಗೆ ಸುರಕ್ಷಿತ ವ್ಯವಸ್ಥೆ ಏರ್ಪಾಡು ಮಾಡುವುದು ಹೋಂ ಸ್ಟೇ ಮಾಲೀಕರ ಜವಾಬ್ದಾರಿ. ಪ್ರವಾಸಿಗರಲ್ಲಿ ಮಹಿಳೆಯರು, ಮಕ್ಕಳೂ ಇರುತ್ತಾರೆ. ಆದ್ದರಿಂದ ಭದ್ರತೆಯ ಖಾತರಿ ನೀಡಬೇಕಾದುದು ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ನೆರವಾಗಬಹುದೆಂದು ಆಶಿಸಬಹುದು.
ಅಧಿಕೃತವಾಗಿ ನೋಂದಣಿಯಾಗಿದ್ದರೆ ಹೋಂ ಸ್ಟೇ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ. ಆದರೆ ನೋಂದಣಿ ಹೆಸರಿನಲ್ಲಿ ಹೋಂ ಸ್ಟೇ ಮಾಲೀಕರಿಗೆ ಅನಗತ್ಯ ಕಿರಿಕಿರಿ ಅಥವಾ ಹೊರೆಯಾಗದಂತೆಯೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಆಸಕ್ತರು ಈ ರಂಗಕ್ಕೆ ಬರಲು ಹಿಂದೇಟು ಹಾಕುವ ಅಪಾಯವೂ ಇರುತ್ತದೆ. ಪ್ರವಾಸೋದ್ಯಮ ರಂಗವು ಭವಿಷ್ಯದಲ್ಲಿ ಕೂಡ ಬೃಹತ್ತಾಗಿ ಬೆಳೆಯುವ ಸಾಧ್ಯತೆಗಳನ್ನು ಹೊಂದಿದ್ದು, ಆದಾಯ, ಉದ್ಯೋಗ ಸೃಷ್ಟಿಯಲ್ಲೂ ತನ್ನದೇ ಆದ ಕೊಡುಗೆ ನೀಡುತ್ತಿದೆ. ಆದ್ದರಿಂದ ಇದರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಬೇಕಾಗುತ್ತದೆ. ಪ್ರವಾಸ ಸುಗಮವಾಗುವಲ್ಲಿ ಸರ್ಕಾರ ಮತ್ತು ಖಾಸಗಿ ವಲಯ ಇಬ್ಬರ ಪಾತ್ರವೂ ಇದೆ.