ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದಿರುವ 216 ಅಭ್ಯರ್ಥಿಗಳನ್ನು ಭವಿಷ್ಯದ ಎಲ್ಲ ಪರೀಕ್ಷೆಗಳಿಂದ ಶಾಶ್ವತವಾಗಿ ನಿಷೇಧಿಸಿರುವುದು, ಮುಂದಿನ ದಿನಗಳಲ್ಲಿ ಅಡ್ಡದಾರಿಯಲ್ಲಿ ಕೆಲಸ ಗಿಟ್ಟಿಸಲು ಯತ್ನಿಸುವ ಅಕ್ರಮ ಜಾಲಗಳಿಗೆ ನೀಡಿದ ಖಡಕ್ ಎಚ್ಚರಿಕೆಯಾಗಿದೆ. ಸರ್ಕಾರಿ ಉದ್ಯೋಗದ ಕನಸು ಹೊತ್ತು ಹಗಲಿರುಳು ಶ್ರಮಿಸುವ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳ ಹಿತರಕ್ಷಣೆ ಮಾಡಲು ಹಾಗೂ ನೇಮಕಾತಿ ವ್ಯವಸ್ಥೆಯಲ್ಲಿ ಕುಸಿದುಬಿದ್ದಿದ್ದ ನಂಬಿಕೆಯನ್ನು ಮರುಸ್ಥಾಪಿಸಲು ಪೊಲೀಸ್ ಇಲಾಖೆ ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದೆ.
ಪ್ರಸ್ತುತ ಸಿವಿಲ್, ಸಶಸ್ತ್ರ, ಕೆಎಸ್ಆರ್ಪಿ ಹಾಗೂ ಕೆಎಸ್ಐಎಸ್ಎಫ್ ಘಟಕಗಳ ಒಟ್ಟು 7,905 ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗೆ ಆಯೋಜಿಸಲಾಗಿರುವ ಲಿಖಿತ ಪರೀಕ್ಷೆಗಳ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ ಡಿಬಾರ್ ಆದ ಕಳಂಕಿತರು ಮತ್ತೆ ಸುಳ್ಳು ಮಾಹಿತಿ ನೀಡಿ ಪರೀಕ್ಷೆಗೆ ಹಾಜರಾಗುವ ಸಾಧ್ಯತೆಯನ್ನು ಮನಗಂಡು, ಇಲಾಖೆಯ ನೇಮಕಾತಿ ವಿಭಾಗವು 216 ಆರೋಪಿಗಳ ಹೆಸರು, ತಂದೆಯ ಹೆಸರು, ಆಧಾರ್ ಸಂಖ್ಯೆ, ಖಾಯಂ ವಿಳಾಸ ಮತ್ತು ಎಫ್ಐಆರ್ ವಿವರಗಳನ್ನೊಳಗೊಂಡ ಸಮಗ್ರ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹಸ್ತಾಂತರಿಸಿದೆ. ಕೆಇಎ ಈ ಮಾಹಿತಿ ಆಧರಿಸಿ ಅಭ್ಯರ್ಥಿಗಳ ಪೂರ್ವಾಪರಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಕಳಂಕಿತರ ಅರ್ಜಿಗಳನ್ನು ತಿರಸ್ಕರಿಸಿ ಹಾಲ್ಟಿಕೆಟ್ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಇಲಾಖೆಯ ಪಾರದರ್ಶಕತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಲಾಖೆಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಉಳಿದಿದ್ದ 2021ರ 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣವು ಇಡೀ ರಾಜ್ಯದ ಗಮನ ಸೆಳೆದಿತ್ತು. ಸಿಐಡಿ ತನಿಖೆಯ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ರಂಥ ಹಿರಿಯ ಅಧಿಕಾರಿಯಿಂದ ಹಿಡಿದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಸೇರಿದಂತೆ 113ಕ್ಕೂ ಹೆಚ್ಚು ಜನ ಜೈಲು ಪಾಲಾಗಿದ್ದರು. ಈ ಹಗರಣದಲ್ಲಿ ಭಾಗಿಯಾಗಿದ್ದ 53 ಪಿಎಸ್ಐ ಅಭ್ಯರ್ಥಿಗಳನ್ನು ಈಗ ಶಾಶ್ವತವಾಗಿ ನಿಷೇಧಿಸಲಾಗಿದೆ. ಹಾಗೆಯೇ, 2018ರ ಸಿವಿಲ್ ಕಾನ್ಸ್ಟೆಬಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 120 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಓಎಂಆರ್ ಶೀಟ್ ತಿದ್ದುಪಡಿ, ಬ್ಲೂಟೂತ್ ಬಳಕೆ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂಡಿಸುವುದು ಹಾಗೂ ಮಧ್ಯವರ್ತಿಗಳಿಗೆ ಹಣ ನೀಡುವುದು ಸೇರಿದಂತೆ ಅಕ್ರಮದ ಎಲ್ಲ ಕಳ್ಳದಾರಿಗಳನ್ನು ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಸಿಐಡಿ ಸಂಗ್ರಹಿಸಿರುವ ಮೊಬೈಲ್ ಸಂಭಾಷಣೆ, ವಾಟ್ಸ್ಆ್ಯಪ್ ಚಾಟ್ಗಳು, ಸಿಸಿಟಿವಿ ದೃಶ್ಯಾವಳಿ, ಹಣ ವರ್ಗಾವಣೆ ದಾಖಲೆ ಹಾಗೂ ತಪ್ಪೊಪ್ಪಿಗೆ ಹೇಳಿಕೆಗಳು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ದೃಢಪಟ್ಟಿರುವುದರಿಂದಲೇ ಈ ಶಾಶ್ವತ ನಿಷೇಧದ ನಿರ್ಧಾರಕ್ಕೆ ಕಾನೂನಾತ್ಮಕ ಬಲ ಸಿಕ್ಕಿದೆ. ಆದರೆ, ಈ ಸುಧಾರಣಾ ಪ್ರಕ್ರಿಯೆ ಕೇವಲ ಅಭ್ಯರ್ಥಿಗಳ ನಿಷೇಧಕ್ಕೆ ಸೀಮಿತವಾಗಬಾರದು. ಹಗರಣಗಳಲ್ಲಿ ಭಾಗಿಯಾಗಿ ಅಮಾನತಾಗಿದ್ದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳುತ್ತಿರುವ ಪ್ರಕ್ರಿಯೆಗಳು ಉದ್ಯೋಗಾಕಾಂಕ್ಷಿಗಳಲ್ಲಿ ಅಪನಂಬಿಕೆ ಮೂಡಿಸದಂತೆ ನೋಡಿಕೊಳ್ಳಬೇಕಿದೆ. ಅಭ್ಯರ್ಥಿಗಳ ಮೇಲೆ ತೋರಿದಷ್ಟೇ ಕಠಿಣ ಕ್ರಮವನ್ನು ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಮೇಲೆಯೂ ಜರುಗಿಸಿದಾಗ ಮಾತ್ರ ಈ ಸುಧಾರಣೆಗೆ ಪೂರ್ಣ ಅರ್ಥ ಬರಲಿದೆ.