ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿ ವರ್ಷ ಕೃಷಿ ಮೇಳ ನಡೆಸಲಾಗುತ್ತಿದ್ದು, ಈ ಸಲ ನ.16ರಂದು ಶುರುವಾಗಿದ್ದು 18ರವರೆಗೆ ನಡೆಯಲಿದೆ. ಬರ ಆವರಿಸಿರುವ ಹಿನ್ನೆಲೆಯಲ್ಲಿ ಮೇಳವನ್ನು ಒಂದು ದಿನಕ್ಕೆ ಸೀಮಿತಗೊಳಿಸಲು ಮುಂಚೆ ನಿರ್ಧರಿಸಲಾಗಿತ್ತಾದರೂ, ನಂತರದಲ್ಲಿ ಎಂದಿನಂತೆ ಮೂರು ದಿನ ಏರ್ಪಡಿಸಲು ನಿರ್ಣಯಿಸಲಾಯಿತು. ಈ ಸಲ ಖಾಸಗಿ ಕಂಪನಿಗಳಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಸರ್ಕಾರಿ ಇಲಾಖೆ-ಸಂಸ್ಥೆಗಳು ಮಾತ್ರ ಪಾಲ್ಗೊಂಡಿವೆ. ಆದ್ದರಿಂದ ಹೋಲಿಕೆಯಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆಯಿದೆ. ಆದರೂ ರೈತರು-ಆಸಕ್ತರು ದೊಡ್ಡ ಪ್ರಮಾಣದಲ್ಲಿ ಬರುತ್ತಿರುವುದು ಗಮನಾರ್ಹ. ಕೃಷಿ ಯಂತ್ರೋಪಕರಣಗಳು, ನೀರು ನಿರ್ವಹಣಾ ತಂತ್ರಜ್ಞಾನ, ಸಸ್ಯ ಸಂರಕ್ಷಣೆ, ಜೈವಿಕ ಗೊಬ್ಬರ, ಬೀಜ ತಾಂತ್ರಿಕತೆ, ಜೈವಿಕ ಇಂಧನ ಇತ್ಯಾದಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರಾಜ್ಯದಲ್ಲಿ ಈಗ ಅನಾವೃಷ್ಟಿ ಕಾಡುತ್ತಿರುವುದರಿಂದಾಗಿ, ಇಂಥ ಸಮಯದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ- ನಿರ್ವಹಣೆ ಹೇಗೆ ಎಂಬ ಬಗ್ಗೆ ಹೆಚ್ಚು ಒತ್ತು ನೀಡಿ ಮಾಹಿತಿ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳಲ್ಲಿಯೂ ಪ್ರತಿ ವರ್ಷ ಕೃಷಿ ಮೇಳ ಹಮ್ಮಿಕೊಳ್ಳಲಾಗುತ್ತದೆ. ಇಂಥ ಸಮಾವೇಶಗಳು ಹಲವು ಬಗೆಗಳಲ್ಲಿ ಪ್ರಯೋಜನಕಾರಿ. ರೈತರಿಗೆ ಹೊಸ ತಾಂತ್ರಿಕತೆ ಹಾಗೂ ಬೆಳೆ-ಕೃಷಿ ವಿಧಾನಗಳ ಪರಿಚಯವಾಗುತ್ತದೆ. ತಮ್ಮ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳಬಹುದು; ಇತರರ ಅನುಭವಗಳನ್ನು ಕೇಳಿ ಅರಿಯಬಹುದು. ಹಾಗೇ, ಕೃಷಿ ತಜ್ಞರು-ವಿಜ್ಞಾನಿಗಳೊಡನೆ ಸಂವಾದ ನಡೆಸಬಹುದು.
ಕೃಷಿ-ತೋಟಗಾರಿಕಾ ವಿವಿಗಳು ನಡೆಸುವ ಸಂಶೋಧನೆ-ಅಧ್ಯಯನಗಳು ಪ್ರಯೋಗಾಲಯಕ್ಕೆ ಸೀಮಿತವಾಗದೆ ರೈತರ ಹೊಲವನ್ನು ತಲುಪಬೇಕು. ಅಂದಾಗ ಮಾತ್ರ ಉದ್ದೇಶ ಈಡೇರುತ್ತದೆ ಎಂಬುದು ಬಹಳ ವರ್ಷಗಳಿಂದ ಇರುವ ಅಪೇಕ್ಷೆ-ನಿರೀಕ್ಷೆ. ಅದೇ ರೀತಿ, ಇತರ ಪ್ರದೇಶ-ರಾಜ್ಯ-ವಿದೇಶಗಳಲ್ಲಿನ ಕೃಷಿ ಬೆಳೆಗಳು-ವಿಧಾನಗಳ ಮಾಹಿತಿಯೂ ಬೇಕಾಗುತ್ತದೆ. ಏಕೆಂದರೆ ಈಗ ಬೇರೆ ಬೇರೆ ದೇಶಗಳೊಂದಿಗೆ ವ್ಯಾಪಾರ-ಕೃಷಿ ಒಪ್ಪಂದ ಇರುವುದರಿಂದಾಗಿ, ಕೃಷಿ ಉತ್ಪನ್ನಗಳು ದೇಶದೇಶಗಳ ಗಡಿಯನ್ನು ದಾಟಿ ಪಯಣಿಸುತ್ತವೆ. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಕೃಷಿ ಮತ್ತು ಸಂಬಂಧಿತ ವಲಯದ ಕೊಡುಗೆ ಸುಮಾರು ಶೇ.17-18ರಷ್ಟಿದೆ. ದೇಶದ ಒಟ್ಟು ಕಾರ್ವಿುಕ ಬಲದಲ್ಲಿ ಶೇ.46ರಷ್ಟು ಮಂದಿ ಈ ವಲಯದಲ್ಲಿದ್ದಾರೆ.
ಬೆಲೆ ಏರಿಳಿತ, ಕಾಲಮಾನದ ಏರುಪೇರು, ಕಾರ್ವಿುಕರ ಕೊರತೆ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಇತ್ಯಾದಿ ಸಮಸ್ಯೆಗಳ ಜೊತೆಗೆ, ಬೇರೆ ಬೇರೆ ಕಾರಣಕ್ಕೆ ಯುವಜನರು ಕೃಷಿಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲವೆಂಬ ಅಳಲು ಹಿರಿಯರದು. ಮತ್ತೊಂದೆಡೆ, ಹಳ್ಳಿಗಳಿಂದ ನಗರ ವಲಸೆ ವರ್ಷವರ್ಷ ಹೆಚ್ಚುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಭವಿಷ್ಯದಲ್ಲಿ ಆತಂಕ ತಪ್ಪಿದ್ದಲ್ಲ. ಎಷ್ಟೇ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಬೀಗಿದರೂ, ಆಹಾರ ಸುರಕ್ಷತೆಗೇ ಆತಂಕ ಎದುರಾದರೆ ಗತಿಯೇನು? ಅಲ್ಲದೆ, ಕೃಷಿಗೆ ಹಿನ್ನಡೆಯಾದರೆ ದೇಶದ ಒಟ್ಟಾರೆ ಬೆಳವಣಿಗೆಗೂ ತೊಂದರೆ. ಕೃಷಿ ರಂಗಕ್ಕಾಗಿ ಸರ್ಕಾರಗಳು ಬೇರೆ ಬೇರೆ ಯೋಜನೆಗಳನ್ನೇನೋ ಘೋಷಿಸಿ ಜಾರಿಗೆ ತರುತ್ತವೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಕೃಷಿರಂಗದ ಇಮೇಜ್ ಬದಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಬೇಕಿದೆ. ಕೃಷಿ ವಿವಿಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡಿ, ಅದರ ಫಲ ರೈತರಿಗೆ ತಲುಪುವಂತೆ ನೋಡಿಕೊಳ್ಳುವ ದಿಕ್ಕಿನಲ್ಲಿ ಸಕ್ರಿಯ ಪಾತ್ರ ನಿರ್ವಹಿಸಬೇಕು.