ವಿಧಾನಸೌಧ 
ರಾಜ್ಯ

ಸಂಪಾದಕೀಯ: ಕಾಳಜಿ ಕಾರ್ಯರೂಪಕ್ಕಿಳಿಯಲಿ

ನಿರುಪಾದಿ ಬ್ಯಾಡಗಿ

ಮುಂಗಾರು ನಮ್ಮ ಕೃಷಿಕ್ಷೇತ್ರದ ಮತ್ತು ಒಟ್ಟಾರೆ ಆರ್ಥಿಕತೆಯ ಜೀವನಾಡಿ. ಆದರೆ, ಈ ಬಾರಿ ಕರ್ನಾಟಕದಲ್ಲಿ ಸುಮಾರು 50 ದಿನಗಳ ಮುಂಗಾರು ಅವಧಿಯಲ್ಲಿ ಬರೀ ಏಳೆಂಟು ದಿನಗಳು ಮಾತ್ರ ಮಳೆ ಆಗಿದ್ದು, ಬಹುತೇಕ 25 ಜಿಲ್ಲೆಗಳಲ್ಲಿ ಮಳೆ ಕೊರತೆಯ ಪ್ರಮಾಣ ತೀವ್ರವಾಗಿದೆ. ರಾಜ್ಯದಲ್ಲಿ ಜುಲೈ 19ರವರೆಗೆ ಮಳೆ ವಾಡಿಕೆಗಿಂತ ಶೇಕಡ 39ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಅತಿ ಹೆಚ್ಚು ಶೇ.43, ಕರಾವಳಿಯಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.33 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.31ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಮಾಹಿತಿ ನೀಡಿದೆ. ತಾಲೂಕುಗಳ ಸ್ಥಿತಿ ನೋಡುವುದಾದರೆ ರಾಜ್ಯದ 149 ತಾಲೂಕುಗಳಲ್ಲಿ ಮಳೆಯ ಕೊರತೆ ಇದೆ. 15 ತಾಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬರದ ಸ್ಥಿತಿ ಕೃಷಿ ವಲಯದ ಜತೆ ಇತರ ರಂಗಗಳನ್ನೂ ಚಿಂತೆಗೀಡು ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಭೀತಿ ಸೃಷ್ಟಿಯಾಗಿದ್ದು, ಗ್ರಾಮೀಣ ಭಾಗದ ಕೃಷಿಕರು ಮತ್ತು ಕೃಷಿ ಕಾರ್ವಿುಕರು ಕೆಲಸ ಹುಡುಕಿಕೊಂಡು ಗುಳೆ ಹೋಗುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಬರ ಎದುರಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭಾನುವಾರ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಮಹತ್ವದ ಸಭೆ ನಡೆಸಿದ್ದು, ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಜುಲೈ ತಿಂಗಳ ಕೊನೆಯಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಸರ್ಕಾರ ಇನ್ನೂ ಬರಪೀಡಿತ ಪ್ರದೇಶ ಮತ್ತು ಪರಿಹಾರವನ್ನು ಘೋಷಿಸಿಲ್ಲ. ಜುಲೈ ಅಂತ್ಯದವರೆಗೆ ಪರಿಸ್ಥಿತಿಯನ್ನು ಪರಾಮಶಿಸಿ, ಆ ಬಳಿಕ ಸೂಕ್ತ ನಿರ್ಧಾರಕ್ಕೆ ಬರಲು ತೀರ್ವನಿಸಿದೆ.

ಬರದಿಂದ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ನಿವಾರಿಸಲು, ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಮತ್ತು ಪ್ರಬಲ ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಬೇಕಿದೆ. ಇದಕ್ಕಾಗಿ, ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿರುವುದು ಸಕಾಲಿಕ ಮತ್ತು ಸ್ವಾಗತಾರ್ಹ ಕ್ರಮವಾಗಿದೆ. ‘ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರಕ್ಕೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕಿರುವುದರಿಂದ ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಾಂಶ ಸಿದ್ಧಪಡಿಸಬೇಕು. ಆಡಳಿತಾತ್ಮಕವಾಗಿ ಕರ್ನಾಟಕ ತಂಡವಾಗಿ ಕೆಲಸ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿರುವ ಸಿಎಂ, ಕೆೆಲಸಕ್ಕಾಗಿ ಗುಳೆ ಹೋಗಲು ಬಿಡಬಾರದು, ಈ ದಿಕ್ಕಿನಲ್ಲಿ ಕೆಲಸ ಸೃಜಿಸಬೇಕು. ವಿಬಿಜಿರಾಮ್ ಯೋಜನೆಯಲ್ಲಿ ಕೂಡಲೇ ಕಾಮಗಾರಿಗಳನ್ನು ಆರಂಭಿಸಬೇಕು. ಹೊಸ ಕೊಳವೆಬಾವಿ ಕೊರೆಯುವಾಗ ಅದರ ವಿಡಿಯೋ ಆಗಬೇಕು ಎಂದು ಹೇಳುವ ಮೂಲಕ ಬರ ಎದುರಿಸುವ ಕೆಲಸಗಳು ಸಮರೋಪಾದಿಯಲ್ಲಿ ನಡೆಸುವಂತೆ ಸೂಚಿಸಿದ್ದಾರೆ. ಸರ್ಕಾರದ ಕಾಳಜಿ ಮತ್ತು ಆಶಯ ಕಾರ್ಯರೂಪಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯವನ್ನು ಬದಿಗಿಟ್ಟು ಸಂಕಷ್ಟದ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಿದ್ದು, ರೈತರ ಬೆನ್ನಿಗೆ ಬೆಂಬಲವಾಗಿ ನಿಲ್ಲಬೇಕಿದೆ.