ರಾಜ್ಯದ ಸರಿಸುಮಾರು ಮುಕ್ಕಾಲು ಜಿಲ್ಲೆಗಳಲ್ಲಿ ಬರ ಆವರಿಸಿದೆ. ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದಿದೆ. ಆದರೆ ಇನ್ನು ಕೆಲ ಜಿಲ್ಲೆಗಳಲ್ಲಿ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ವಾಸ್ತವದಲ್ಲಿ ರಾಜ್ಯದಲ್ಲಿ ಮುಂಗಾರು ಬಿತ್ತನೆ ಗುರಿ 84.10 ಲಕ್ಷ ಹೆಕ್ಟೇರ್ ಇದೆ. ಆದರೆ ಈವರೆಗೆ ಆಗಿದ್ದು 43.98 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ. ಇದು ಸಹಜವಾಗಿಯೇ ಎಲ್ಲರನ್ನೂ ಕಳವಳಕ್ಕೀಡು ಮಾಡುವ ಚಿತ್ರಣ. ಏಕೆಂದರೆ, ಕೃಷಿ ಚಟುವಟಿಕೆ ಸರಿಯಾಗಿ ಆಗಿ, ಬೆಳೆ ಸಮರ್ಪಕವಾಗಿ ಬರದೆ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ರಾಜ್ಯ ಸರ್ಕಾರ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಶನಿವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ, ವಾಸ್ತವ ಚಿತ್ರಣವನ್ನು ಅರಿತಿದ್ದಾರೆ.
ಮಳೆ ಬೀಳುವ ಸಂಭಾವ್ಯ ದಿನ ತಿಳಿಯಲು ಎಐ ಆಧಾರಿತ ಸಮೀಕ್ಷೆ ನಡೆಸಲು ಮತ್ತು ಅನಿವಾರ್ಯವಾದಲ್ಲಿ ಮೋಡ ಬಿತ್ತನೆ ಬಗ್ಗೆ ನಿರ್ಣಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ತಂಡ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲೂ ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಈ ನಡುವೆ, ಬರ ಸನ್ನಿವೇಶ ಹಾಗೂ ರಾಜ್ಯದ ಬಾಕಿ ಯೋಜನೆಗಳ ಬಗ್ಗೆ ಚರ್ಚಿಸಿ, ಕೇಂದ್ರದ ಮೇಲೆ ಒತ್ತಡ ತರುವ ಉದ್ದೇಶವನ್ನಿಟ್ಟುಕೊಂಡು ಮುಖ್ಯಮಂತ್ರಿಗಳು ಸೋಮವಾರ ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯನ್ನು ಕರೆದಿದ್ದಾರೆ. ಇದೊಂದು ಉತ್ತಮ ನಡೆಯಾಗಿದ್ದು, ರಾಜ್ಯದ ವಿಷಯಗಳನ್ನು ವಿವರವಾಗಿ ಚರ್ಚಿಸಲು ಉತ್ತಮ ವೇದಿಕೆ ಸೃಷ್ಟಿಯಾದಂತಾಗುತ್ತದೆ.
ನಮ್ಮದು ಒಕ್ಕೂಟ ವ್ಯವಸ್ಥೆಯಾಗಿದ್ದು, ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಹಕಾರ ಹಾಗೂ ಸಮನ್ವಯ ಅಗತ್ಯವಾಗುತ್ತದೆ. ರಾಜಕೀಯ ಸಿದ್ಧಾಂತಗಳು ಬೇರೆಬೇರೆಯಾಗಿದ್ದರೂ, ರಾಜ್ಯ-ದೇಶದ ಹಿತಾಸಕ್ತಿ ವಿಚಾರ ಬಂದಾಗ ಒಗ್ಗಟ್ಟಿನ ನಡೆಯನ್ನು ಜನರು ಅಪೇಕ್ಷಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಪೈಪೋಟಿ, ವಾಗ್ವಾದ ಇವೆಲ್ಲ ಸಹಜ. ಆದರೆ, ಉಳಿದಂತೆ ಒಟ್ಟಾಗಿ ಹೋಗುವ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ನಡುವೆ ಬೆಂಗಳೂರಿನಲ್ಲಿ ಸಭೆ ಏರ್ಪಾಡಾಗಿರುವುದು ಸಹ ಉತ್ತಮ ಹೆಜ್ಜೆ.
ಇನ್ನೊಂದಡೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬ ದೂರು ರೈತರಿಂದ ಕೇಳಿಬಂದಿದೆ. ಬೆಳೆಸಾಲ ಪಡೆದವರಿಂದ ಮಾತ್ರ ವಿಮಾ ಕಂತು ಕಟ್ಟಿಸಿಕೊಳ್ಳುವುದಾಗಿ ಬ್ಯಾಂಕ್‌ನವರು ಹೇಳುತ್ತಿರುವುದು ಅನೇಕ ರೈತರಿಗೆ ಸಮಸ್ಯೆಯಾಗಿದೆ. ಇನ್ನು, ಗ್ರಾಹಕರ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಕೆಲವೆಡೆ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ರೈತರಿಗೆ ಮಾರ್ಗದರ್ಶನ ದೊರೆಯುತ್ತಿಲ್ಲ. ಮುಂಗಾರು ಮಳೆ ಸರಿಯಾಗಿ ಬೀಳದೆ ಇರುವುದರಿಂದ ಮುಂದೆ ಬೆಳೆ ಪ್ರಮಾಣ ತಗ್ಗುವ ಆತಂಕ ರೈತರಲ್ಲಿದ್ದು, ಬೆಳೆ ವಿಮೆ ಮಾಡಿಕೊಂಡರೆ ಅನುಕೂಲ ಆಗಬಹುದು ಎಂಬ ಅನಿಸಿಕೆ ಸಹಜ. ಈ ಕುರಿತು ಸರ್ಕಾರ ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ. ತಾಂತ್ರಿಕ ಕಾರಣಕ್ಕೆ ರೈತರು ಇಂತಹ ಸವಲತ್ತುಗಳಿಂದ ವಂಚಿತವಾಗಬಾರದು.