Editorial 
ರಾಜ್ಯ

ಸಂಪಾದಕೀಯ: ಉತ್ತಮ ನಿರ್ಧಾರ

ಮಣಿಕಂಠ ಪಾ ಹಿರೇಮಠ
ಜನಸಾಮಾನ್ಯರ ದೂರು, ದುಮ್ಮಾನ ಆಲಿಸುವ ಉದ್ದೇಶದಿಂದ ‘ಪ್ರಜಾಸೇವೆ ಇಲಾಖೆ’ ಸ್ಥಾಪಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವುದು ಸ್ವಾಗತಾರ್ಹ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಇದೊಂದು ಪ್ರಮುಖ ಮತ್ತು ಆಶಾದಾಯಕ ಹೆಜ್ಜೆಯಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳ ಜನತಾ ದರ್ಶನ ಅಥವಾ ಜನಸ್ಪಂದನ ಸಭೆಗಳ ಮೂಲಕ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿತ್ತು. ಆದರೆ, ಆ ಪೈಕಿ ಬಹಳಷ್ಟು ಅಹವಾಲುಗಳು ಸಮನ್ವಯದ ಕೊರತೆಯಿಂದ ಮತ್ತು ಇಲಾಖೆಗಳ ನಡುವಿನ ಗೊಂದಲದಿಂದ ನನೆಗುದಿಗೆ ಬೀಳುತ್ತಿದ್ದವು. ಆದರೆ, ಈಗ ಆಡಳಿತ ಚುರುಕುಗೊಳಿಸುವ ಸಂಬಂಧ ಪ್ರಜಾಸೇವೆಗೆ ಪ್ರತ್ಯೇಕ ಇಲಾಖೆ, ಅದಕ್ಕೆ ಸಚಿವರು ಮತ್ತು ಐಎಎಸ್ ಅಧಿಕಾರಿ ನಿಯೋಜಿಸಲ್ಪಡುವುದರಿಂದ ಸಮಸ್ಯೆಗಳು ಬೇಗ ಇತ್ಯರ್ಥಗೊಳ್ಳಬಹುದು ಮತ್ತು ದೂರುಗಳ ಪರಿಹಾರಕ್ಕೆ ಸೂಕ್ತ ಉತ್ತರದಾಯಿತ್ವ ದೊರಕಿದಂತಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರ ಜತೆಗೆ ವಾರಕ್ಕೊಮ್ಮೆ ಈ ಇಲಾಖೆ ಮೂಲಕ ಜನಸ್ಪಂದನ ಸಭೆ ನಡೆಸಬೇಕು ಎಂದು ಸೂಚಿಸಲಾಗಿದೆ. ‘ನಮಗೆ ಜನರ ಹಿತ ಮುಖ್ಯ. ಇಲ್ಲಿ ಯಾರೂ ಸರ್ವಜ್ಞರಲ್ಲ. ಸಕಾಲ, ಇ-ಆಡಳಿತ ಸೇರಿದಂತೆ ಎಲ್ಲವನ್ನೂ ಬಳಸಿ ಜನರ ಸಮಸ್ಯೆ ನಿವಾರಿಸಲಾಗುವುದು. ಮಾಧ್ಯಮದಲ್ಲಿ ಬಂದಂತಹ ವಿಚಾರಗಳನ್ನು ತಿಳಿದು ನಾವೂ ಕ್ರಮ ತೆಗೆದುಕೊಳ್ಳುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆಧುನೀಕರಣ ಮತ್ತು ತಂತ್ರಜ್ಞಾನದ ಇಂದಿನ ಯುಗದಲ್ಲೂ ಬಹುತೇಕ ಹಳ್ಳಿಗಳು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಳ್ಳಿಗರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸೂಕ್ತ ವೇದಿಕೆಯ ಹುಡುಕಾಟದಲ್ಲಿದ್ದರು. ಈಗ ಗ್ರಾಮಸ್ಥರು ಕೂಡ ಹೊಸ ಇಲಾಖೆಗೆ ನೇರ ಅಹವಾಲು ಸಲ್ಲಿಸಬಹುದಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬರುವ ಸಾರ್ವಜನಿಕರು, ಪ್ರತಿಭಟನಾಕಾರರು ಅಥವಾ ವಿವಿಧ ಸಂಘಟನೆಗಳು ತಮ್ಮ ಅಹವಾಲುಗಳನ್ನು ಸಲ್ಲಿಸಲು ಈಗ ಒಂದು ನಿರ್ದಿಷ್ಟ ವೇದಿಕೆ ಸಿಗುತ್ತದೆ. ಒಬ್ಬರೇ ಸಚಿವರು ಇದಕ್ಕೆ ಜವಾಬ್ದಾರರಾಗಿರುವುದರಿಂದ ಸಮಸ್ಯೆಗಳು ಬೇಗನೆ ಇತ್ಯರ್ಥವಾಗುತ್ತವೆ. ನಾಗರಿಕರು ತಮ್ಮ ಅಹವಾಲುಗಳಿಗಾಗಿ ಬೇರೆ ಬೇರೆ ಇಲಾಖೆಗಳ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ.
ಎಲ್ಲ ಇಲಾಖೆಗಳ ದೂರುಗಳನ್ನು ಸ್ವೀಕರಿಸಿ ಸಮನ್ವಯಗೊಳಿಸುವ ಕೇಂದ್ರಬಿಂದುವಾಗಿ ಈ ಇಲಾಖೆ ಕೆಲಸ ಮಾಡುತ್ತದೆ.ಜನರ ಬೇಡಿಕೆಗಳನ್ನು ಪರಿಶೀಲಿಸಿ, ಅರ್ಹರಿಗೆ ತಕ್ಷಣ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಹೊಸ ಇಲಾಖೆಯು ಎಲ್ಲ ಇಲಾಖೆಗಳಿಂದ ಬರುವ ದೂರುಗಳ ಮೇಲೆ ನಿಗಾ ಇಡುವುದರಿಂದ, ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲಾಖೆಗಳಲ್ಲಿ ಕಡತಗಳು ಬಾಕಿ ಉಳಿಯುವುದು ಅಥವಾ ಅಧಿಕಾರಿಗಳು ಉದಾಸೀನತೆ ತೋರುವುದಕ್ಕೆ ಇನ್ನು ನೇರ ಕಡಿವಾಣ ಹಾಕಬಹುದು. ಇಂಥ ಮಹತ್ವದ ಕ್ರಮವು ಘೋಷಣೆಗೆ ಅಥವಾ ಆರಂಭೋತ್ಸಾಹಕ್ಕೆ ಸೀಮಿತವಾಗಬಾರದು. ಜನರು ಸರ್ಕಾರಿ ಕಚೇರಿಗಳಿಗೆ ಅಲೆದು ದಣಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಸ್ಪಂದನೆ ನೀಡಬೇಕು. ನಿಜಾರ್ಥದಲ್ಲಿ ಸಮಸ್ಯೆಯನ್ನು ನಿವಾರಿಸಿ ಜನಪರ ಆಡಳಿತ ನೀಡಲು ಪರಿಣಾಮಕಾರಿಯಾಗಿ ಯತ್ನಿಸಲಿ ಎಂಬುದೇ ಆಶಯ.