ಸರ್ಕಾರಿ ಹಾಗೂ ಗ್ರಾಮೀಣ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಹಾಗೂ ಉದ್ಯೋಗದಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶೇಕಡ 15ರಷ್ಟು ಗ್ರಾಮೀಣ ಮೀಸಲಾತಿಯೊಂದಿಗೆ ಹೆಚ್ಚುವರಿಯಾಗಿ ಶೇ.7ರಷ್ಟು ಆಂತರಿಕ ಮೀಸಲಾತಿ ಕಲ್ಪಿಸುವ ಕುರಿತು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಘೋಷಿಸಿದ್ದಾರೆ. ನಿಜಕ್ಕೂ ಇದೊಂದು ಉತ್ತಮ ಚಿಂತನೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂದಿಗೂ ಅವಕಾಶಗಳ ಕೊರತೆ ಇದ್ದು, ತೀವ್ರ ಸ್ಪರ್ಧಾತ್ಮಕತೆ ಅವರನ್ನು ಚಿಂತೆಗೀಡು ಮಾಡಿದೆ. ನಗರದ ವಿದ್ಯಾರ್ಥಿಗಳಿಗೆ ಸಿಗುವ ಅತ್ಯಾಧುನಿಕ ತರಬೇತಿ, ಇಂಟರ್ನೆಟ್ ಸೌಲಭ್ಯ ಹಾಗೂ ಸುಸಜ್ಜಿತ ಗ್ರಂಥಾಲಯಗಳು ಇಂದಿಗೂ ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳಿಗೆ ಮರೀಚಿಕೆಯಾಗಿವೆ.
ಈ ನಿಟ್ಟಿನಲ್ಲಿ ಸರ್ಕಾರದಿಂದ ಪ್ರೋತ್ಸಾಹ ಸಿಕ್ಕರೆ ಅನುಕೂಲಕರ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಗರ ಕೇಂದ್ರಿತ ಶಿಕ್ಷಣ ಪಡೆದವರ ಜತೆ ಸೆಣಸಲಾಗದೆ ಹಿಂದುಳಿಯುತ್ತಿರುವ ಹಳ್ಳಿ ಪ್ರತಿಭೆಗಳಿಗೆ ಇದು ಭರವಸೆಯ ಬೆಳಕಾಗಬಲ್ಲದು. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳು ಖಾಸಗಿ ಶಾಲೆಗಳ ದುಬಾರಿ ಶುಲ್ಕ, ಡೊನೇಶನ್ ಹೊರೆಯಿಂದ ಮುಕ್ತವಾಗುತ್ತವೆ. ಬಡ, ಹಿಂದುಳಿದ ವರ್ಗಗಳ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಆಶಯಕ್ಕೆ ಬಲ ಬರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೇರ ಮೀಸಲಾತಿ ನೀಡಿದರೆ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಪ್ರಭಾವಿ ಅಸ್ತ್ರವಾಗಬಲ್ಲದು. ಉಚಿತ ಸಮವಸ್ತ್ರ ಅಥವಾ ಬಿಸಿಯೂಟದ ಸೌಲಭ್ಯಗಳಿಂದ ಮಾತ್ರ ಮಕ್ಕಳನ್ನು ಶಾಲೆಗಳತ್ತು ಆಕರ್ಷಿಸಲು ಸಾಧ್ಯವಾಗದ ಇಂದಿನ ದಿನಗಳಲ್ಲಿ, ಭವಿಷ್ಯದ ಭದ್ರತೆ ಮತ್ತು ಉದ್ಯೋಗಾವಕಾಶದ ಖಾತರಿ ದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತವೆ. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ವೈದ್ಯಕೀಯ, ಇಂಜಿನಿಯರಿಂಗ್, ಕೆಪಿಎಸ್ಸಿ ಹಾಗೂ ಇತರ ಸರ್ಕಾರಿ ಉದ್ಯೋಗಗಳಲ್ಲಿ ನೇರ ಆದ್ಯತೆ ಸಿಗುತ್ತದೆ ಎಂದಾದರೆ, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಾರೆ.
ಮಕ್ಕಳ ಕೊರತೆಯಿಂದಾಗಿ ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚುವ ಅಥವಾ ‘ವಿಲೀನ’ವಾಗುವ ಹಂತ ತಲುಪಿವೆ. ಮೀಸಲಾತಿಯ ಆಕರ್ಷಣೆಯಿಂದಾಗಿ ದಾಖಲಾತಿ ಸಂಖ್ಯೆ ಗಣನೀಯವಾಗಿ ಹೆಚ್ಚಿ, ಶಾಲೆಗಳು ಮುಚ್ಚುವುದು ತಪ್ಪುತ್ತದೆ. ತಮಿಳುನಾಡಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವೈದ್ಯಕೀಯ ಕೋರ್ಸ್ಗಳಲ್ಲಿ ನೀಡಿದ ಶೇ.7.5 ಮೀಸಲಾತಿ ಇದಕ್ಕೆ ಸ್ಪಷ್ಟ ನಿದರ್ಶನ; ಅಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ, ಸರ್ಕಾರವು ಹೊಸ ಕೊಠಡಿಗಳು, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಶಿಕ್ಷಕರ ನೇಮಕಾತಿಗೆ ವ್ಯಯಿಸುತ್ತಿರುವ ಅನುದಾನದ ದೊಡ್ಡ ಮೊತ್ತವೂ ಸದ್ವಿನಿಯೋಗವಾಗುತ್ತದೆ.
ಆದರೆ, ಕೇವಲ ಹೇಳಿಕೆ ಅಥವಾ ಭರವಸೆಯಾಗಿ ಉಳಿಯದೆ ಇದು ಕಾಯ್ದೆಯ ಚೌಕಟ್ಟಿನಲ್ಲಿ ಶೀಘ್ರ ಜಾರಿಯಾಗಬೇಕು. ಕಾನೂನು ತೊಡಕುಗಳು ಎದುರಾಗದಂತೆ ಎಚ್ಚರವಹಿಸಿ, ಅರ್ಹ ಬಡ ಗ್ರಾಮೀಣ ಪ್ರತಿಭೆಗಳಿಗೆ ಮಾತ್ರ ಇದರ ಫಲ ದೊರೆಯುವಂತೆ ನಿಯಮಗಳನ್ನು ರೂಪಿಸುವುದು ಸರ್ಕಾರದ ಕರ್ತವ್ಯ. ಈ ನೀತಿಯು ಕೇವಲ ಮೀಸಲಾತಿಯಾಗಿ ಉಳಿಯದೆ, ದುರ್ಬಲಗೊಳ್ಳುತ್ತಿರುವ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಜೀವ ತುಂಬುವ ಕಾರ್ಯತಂತ್ರವಾಗಲಿದೆ.