ಹೊಸ ವರ್ಷ ಅಂದರೆ, 2027ರ ಆರಂಭದಿಂದ ಸಂಚಾರ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪುನರಾವರ್ತಿತ ಉಲ್ಲಂಘನೆಗೆ ವಾಹನ ಸೀಜ್ ಮಾಡುವುದು, ಹಾಫ್ ಹೆಲ್ಮೆಟ್ ನಿರ್ಬಂಧ ಮುಂತಾದ ಪ್ರಸ್ತಾಪಗಳು ಇದರಲ್ಲಿ ಸೇರಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ನೂತನ ನಿಯಮಗಳ ಸಂಬಂಧ ಕಾನೂನು ರೂಪಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಹೊಸ ವರ್ಷದಷ್ಟೊತ್ತಿಗೆ ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಾದಚಾರಿ ಮಾರ್ಗದ ಮೇಲೆ ದ್ವಿಚಕ್ರ ವಾಹನ ಓಡಿಸಿದರೆ ಮೊದಲ ಬಾರಿಗೆ 5 ಸಾವಿರ ರೂ. (ಈಗ 1 ಸಾವಿರ ರೂ. ದಂಡ ಇದೆ), ಎರಡನೇ ಬಾರಿಗೆ 10 ಸಾವಿರ ರೂ. ಹಾಗೂ ಮೂರನೇ ಬಾರಿಗೆ ಉಲ್ಲಂಘನೆಗೆ ವಾಹನ ಸೀಜ್ ಮಾಡುವ ಪ್ರಸ್ತಾಪ ಇದೆ. ವಾಹನ ಸವಾರ ಮತ್ತು ಹಿಂಬದಿ ಸವಾರರ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಸಜ್ಜಾಗಿದೆ. ಇದರಿಂದಾಗಿ ಇಂಥ ಹೆಲ್ಮೆಟ್ ಉತ್ಪಾದನೆ ಹಾಗೂ ಮಾರಾಟ ಸಹಜವಾಗಿ ತಗ್ಗಲಿದೆ.
ಇದರೊಂದಿಗೆ ಇನ್ನೊಂದು ಮಹತ್ವದ ಕ್ರಮಕ್ಕೂ ಸರ್ಕಾರ ಆಲೋಚಿಸಿದೆ. ಆಪ್ ಆಧಾರಿತ ಅಗ್ರಿ್ರೇಟರ್ಗಳಾದ ಓಲಾ, ಊಬರ್ ಸೇರಿ ಎಲ್ಲ ಬಗೆಯ ಟ್ಯಾಕ್ಸಿಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗುತ್ತದೆ. ಆಟೊರಿಕ್ಷಾಗಳ ಹಾಗೆ ಎಲ್ಲ ಟ್ಯಾಕ್ಸಿಗಳೂ ಮೀಟರ್ ಅಳವಡಿಸಬೇಕಿದ್ದು, ಪ್ರಯಾಣಿಸಿದ ದೂರಕ್ಕೆ ತಕ್ಕಂತೆ, ಸರ್ಕಾರ ನಿಗದಿಪಡಿಸಿದ ದರದಲ್ಲಿ ಪ್ರಯಾಣಿಕರಿಂದ ಶುಲ್ಕ ತೆಗೆದುಕೊಳ್ಳಬೇಕಾಗುತ್ತದೆ. ಆಪ್ ಆಧಾರಿತ ಅಗ್ರಿಗೇಟರ್ಗಳಿಂದ ಟ್ಯಾಕ್ಸಿ ಚಾಲಕ-ಮಾಲೀಕರಿಗೆ ಆಗುತ್ತಿದೆಯೆನ್ನಲಾದ ಶೋಷಣೆ ತಪ್ಪಿಸಲು ಇದರಿಂದ ಅನುವಾಗುತ್ತದೆ ಎಂಬುದು ಸರ್ಕಾರದ ಅಂಬೋಣ. ಮೀಟರ್ ಇದ್ದರೆ ಪ್ರಯಾಣಿಕರಿಗೂ ನಿಖರ ಲೆಕ್ಕ ಗೊತ್ತಾಗುತ್ತದೆ. ಆದರೆ ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆಯೇ ಎಂಬುದು ಪ್ರಶ್ನೆ.
ಅತಿವೇಗ, ರಸ್ತೆ ಅವ್ಯವಸ್ಥೆ, ಕುಡಿದು ವಾಹನ ಚಾಲನೆ, ನಿರ್ಲಕ್ಷ್ಯದ ಚಾಲನೆ ಇತ್ಯಾದಿ ಜತೆಗೆ ಅಚಾನಕ್ಕಾಗಿ ಆಗುವ ಅವಘಡಗಳ ಕಾರಣಕ್ಕೆ ಕರ್ನಾಟಕವೂ ಸೇರಿ ದೇಶದಲ್ಲಿ ರಸ್ತೆ ಅಪಘಾತಗಳಿಂದ ಆಗುವ ಸಾವುನೋವುಗಳು ಹೆಚ್ಚುತ್ತಲೇ ಇವೆ. ಕರ್ನಾಟಕವನ್ನೇ ತೆಗೆದುಕೊಂಡರೆ, 2021ರಲ್ಲಿ ಅಪಘಾತಗಳ ಸಂಖ್ಯೆ 31,434 ಇದ್ದರೆ, 2025ರಲ್ಲಿ 37,682 ಅಂದರೆ ಶೇ.20ರಷ್ಟು ಹೆಚ್ಚಳವಾಗಿದೆ. ಹೀಗಾಗಿ ಬಿಗಿಯಾದ ಸಂಚಾರ ನಿಯಮಗಳ ಜಾರಿ ಅನಿವಾರ್ಯ. ಜನರು ಸಹ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ, ಸಂಚಾರಯೋಗ್ಯ ರಸ್ತೆಗಳನ್ನು ನಿರ್ವಿುಸಿ ನಿರ್ವಹಿಸಬೇಕಾದ ಜವಾಬ್ದಾರಿ ಸರ್ಕಾರಗಳದು ಎಂಬುದನ್ನು ಮರೆಯುವಂತಿಲ್ಲ. ಬೆಂಗಳೂರಿನಂತಹ ನಗರದಲ್ಲಿ ರಸ್ತೆಗುಂಡಿ ಸಮಸ್ಯೆ ಸದಾ ಇರುತ್ತದೆ.
ಇತರ ನಗರ-ಪಟ್ಟಣಗಳ ಸ್ಥಿತಿಯೂ ಭಿನ್ನವೇನಲ್ಲ. ಗ್ರಾಮಾಂತರ ಪ್ರದೇಶಗಳ ಕಥೆ ಕೇಳುವುದೇ ಬೇಡ. ಗುಣಮಟ್ಟದ ರಸ್ತೆಗಳನ್ನು ನಿರ್ವಿುಸದೆ, ಕೇವಲ ಜನರ ಬಳಿ ಸಂಚಾರ ನಿಯಮ ಪಾಲಿಸಿ ಎಂದು ಹೇಳಿ ಸರ್ಕಾರಗಳು ಹೊಣೆಗಾರಿಕೆಯಿಂದ ಜಾರಿಕೊಳ್ಳಲಾಗದು. ಇಪ್ಪತ್ತು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆ-ತಾಲೂಕುಗಳ ಸುಮಾರು 2 ಸಾವಿರ ಕಿಲೋಮೀಟರ್ಗಳಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಕಾಲಮಿತಿಯಲ್ಲಿ ಈ ಯೋಜನೆ ಜಾರಿಯಾದರೆ ಉತ್ತಮ.