ರಾಜ್ಯ

ಸಂಪಾದಕೀಯ: ಆನೆಗಳ ದಾಳಿ ಹೆಚ್ಚಳ

ಕಾಡಾನೆಗಳ ದಾಳಿಗೆ ಮೂರು ದಿನಗಳಲ್ಲಿ ಮೂವರು ಮೃತಪಟ್ಟಿರುವುದು ರಾಜ್ಯದಲ್ಲಿ ಮಾನವ&ವನ್ಯಜೀವಿ ಸಂಘರ್ಷದ ತೀವ್ರತೆಯನ್ನು ಎತ್ತಿತೋರಿಸಿದೆ. ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಜನರು ಜೀವಭಯದಲ್ಲಿ ಬದುಕುವಂತಾಗಿದೆ. ಬೆಳೆ ನಾಶ, ಮನೆಗಳಿಗೆ ಹಾನಿ ಮಾತ್ರವಲ್ಲ, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಗಂಭೀರ ಸಂಗತಿ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿರುವುದಕ್ಕೆ ಅರಣ್ಯ ಪ್ರದೇಶದ ಒತ್ತುವರಿ, ಅವುಗಳ ಆವಾಸಸ್ಥಾನಗಳ ನಾಶ, ಆಹಾರ ಮತ್ತು ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಕಾಡುಗಳ ವ್ಯಾಪ್ತಿ ಕುಗ್ಗಿದಂತೆ ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಬರುವುದು ಅನಿವಾರ್ಯವಾಗುತ್ತಿದೆ. ಆದರೆ, ಇದರಿಂದ ಜನರ ಬದುಕು ಮತ್ತು ಕೃಷಿ ಚಟುವಟಿಕೆಗಳು ಅಪಾಯಕ್ಕೆ ಸಿಲುಕುತ್ತಿವೆ. ಈ ಸಂಘರ್ಷಕ್ಕೆ ಜನರನ್ನು ಹೊಣೆ ಮಾಡುವುದಾಗಲಿ, ಪ್ರಾಣಿಗಳನ್ನು ದೂಷಿಸುವುದಾಗಲಿ ಪರಿಹಾರವಲ್ಲ. ಸಮಸ್ಯೆಯ ಮೂಲವನ್ನು ಗುರುತಿಸಿ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬೇಕು.

ಆನೆಗಳನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ತರಬೇತಿ ಹೊಂದಿದ ಪರಿಣತ ಸಿಬ್ಬಂದಿಯ ಕೊರತೆಯೂ ಈ ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ. ಆನೆಗಳನ್ನು ಸೆರೆ ಹಿಡಿಯುವುದು, ಸ್ಥಳಾಂತರಿಸುವುದು, ಜನವಸತಿ ಪ್ರದೇಶಗಳಿಂದ ಸುರಕ್ಷಿತವಾಗಿ ದೂರ ಓಡಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ವಿಶೇಷ ತರಬೇತಿ, ಅನುಭವ ಮತ್ತು ಸೂಕ್ತ ಉಪಕರಣಗಳ ಅಗತ್ಯವಿದೆ. ಇಂತಹ ಕಾರ್ಯಾಚರಣೆಗಳಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಜೀವಕ್ಕೂ ಅಪಾಯವಿರುತ್ತದೆ. ಹೀಗಾಗಿ ಅರಣ್ಯ ಇಲಾಖೆಯಲ್ಲಿ ಪರಿಣತರ ತಂಡಗಳನ್ನು ರೂಪಿಸಿ, ಅಗತ್ಯ ತರಬೇತಿ ಮತ್ತು ಸೌಲಭ್ಯ ಒದಗಿಸಬೇಕು.

ಆನೆಗಳ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಕೇರಳದ ಅನುಭವವನ್ನು ಕರ್ನಾಟಕವೂ ಅಧ್ಯಯನ ಮಾಡಬಹುದು. ಕೇರಳದಲ್ಲಿ ಇಂತಹ ಅನಾಹುತಗಳು ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬ ಹಿನ್ನೆಲೆಯಲ್ಲಿ, ಅಲ್ಲಿನ ಆನೆಗಳ ಸಾಕಣೆ, ನಿಯಂತ್ರಣ, ನಿರ್ವಹಣೆ ಮತ್ತು ತರಬೇತಿ ವ್ಯವಸ್ಥೆ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು. ಅಲ್ಲಿನ ಮಾದರಿ ಕರ್ನಾಟಕಕ್ಕೆ ಸೂಕ್ತವೆನಿಸಿದರೆ, ಇಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಬೇರೆ ರಾಜ್ಯಗಳ ಉತ್ತಮ ಅನುಭವಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂಜರಿಕೆ ಇರಬಾರದು.

ಆನೆಗಳಷ್ಟೇ ಅಲ್ಲ, ಚಿರತೆಗಳೂ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಪ್ರಾಣಿಗಳನ್ನು ಸೆರೆಹಿಡಿದ ಬಳಿಕ ಎಲ್ಲಿ ಬಿಡಬೇಕು, ಅವು ಮತ್ತೆ ನಾಡಿನತ್ತ ಬರದಂತೆ ಏನು ಮಾಡಬೇಕು ಎಂಬುದಕ್ಕೆ ಸ್ಪಷ್ಟ ನೀತಿ ಅಗತ್ಯ. ದಟ್ಟ ಅರಣ್ಯ ಪ್ರದೇಶಗಳಲ್ಲಿ ಆಹಾರ, ನೀರು ಮತ್ತು ಸುರಕ್ಷಿತ ಆವಾಸಸ್ಥಾನ ಇರುವ ಕಡೆಗೆ ಸ್ಥಳಾಂತರಿಸುವ ಸಾಧ್ಯತೆಗಳನ್ನು ತಜ್ಞರ ಸಲಹೆಯೊಂದಿಗೆ ಪರಿಶೀಲಿಸಬೇಕು. ಸ್ಥಳಾಂತರವೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು.

ಜನರ ಜೀವ ರಕ್ಷಣೆಗೆ ತಾತ್ಕಾಲಿಕ ಪರಿಹಾರಗಳಿಗಿಂತ ಶಾಶ್ವತ ಕ್ರಮಗಳು ಮುಖ್ಯ. ಆನೆಗಳ ಚಲನವಲನದ ಬಗ್ಗೆ ಮುನ್ನೆಚ್ಚರಿಕೆ, ತ್ವರಿತ ಕಾರ್ಯಾಚರಣೆ, ಪರಿಹಾರ ವಿತರಣೆ ಮತ್ತು ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಜನರು ಮತ್ತು ವನ್ಯಜೀವಿಗಳು ಸಂಘರ್ಷವಿಲ್ಲದೆ ಬದುಕುವ ವಾತಾವರಣ ನಿರ್ಮಿಸುವುದು ಸರ್ಕಾರದ ಹೊಣೆ. ನಿರಂತರ ಜೀವಹಾನಿಯ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆಯ ಕ್ರಮಗಳೇ ಪರಿಣಾಮಕಾರಿಯಾಗಬೇಕು.