Editorial 
ರಾಜ್ಯ

ಸಂಪಾದಕೀಯ: ಡ್ರಗ್ಸ್​ ಫ್ಯಾಕ್ಟರಿ ಆತಂಕಕಾರಿ

ಸಂಪಾದಕೀಯ: ಭಾರತದ ಸಿಲಿಕಾನ್​ ಸಿಟಿ ಎಂದೇ ವಿಶ್ವಮಟ್ಟದಲ್ಲಿ ಪ್ರಸಿದ್ಧವಾಗಿರುವ, ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿರುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಅಪರಾಧ ಲೋಕದ ಕರಾಳ ಕೃತ್ಯಗಳಿಗೆ ಸಾಕ್ಷಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಹೊರವಲಯದ ಮನೆಗಳಲ್ಲಿ ಮೂರು ಮೆಫೆಡ್ರೋನ್​ ಡ್ರಗ್ಸ್​ ತಯಾರಿಕಾ ಘಟಕಗಳು ಪತ್ತೆಯಾಗಿವೆ. ನಗರ ಈಗ ಮಾದಕ ವಸ್ತುಗಳ ಮಾರುಕಟ್ಟೆಯಾಗಿ ಮಾತ್ರ ಉಳಿಯದೆ, ಅವುಗಳ ತಯಾರಿಕಾ ಕೇಂದ್ರವಾಗಿಯೂ ಬದಲಾಗುತ್ತಿರುವುದು ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.
ಈ ಹಿಂದೆ ವಿದೇಶಗಳಿಂದ ಅಥವಾ ಬೇರೆ ರಾಜ್ಯಗಳಿಂದ ಡ್ರಗ್ಸ್​ ಬೆಂಗಳೂರಿಗೆ ಸರಬರಾಜಾಗುತ್ತಿತ್ತು. ಆದರೆ ಈಗ, ನಗರದೊಳಗಿನ ವಸತಿ ಪ್ರದೇಶಗಳಲ್ಲಿಯೇ ರಾಸಾಯನಿಕಗಳನ್ನು ಬಳಸಿ ಸಿಂಥೆಟಿಕ್​ ಡ್ರಗ್ಸ್​ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ 2020 ಮತ್ತು 2021ರಲ್ಲಿ ಕೂಡ ಎಲೆಕ್ಟ್ರಾನಿಕ್​ ಸಿಟಿ ಮತ್ತು ಜಿಗಣಿಯಲ್ಲಿ ಮಿನಿ ಡ್ರಗ್​ ಫ್ಯಾಕ್ಟರಿಗಳು ಪತ್ತೆಯಾಗಿದ್ದವು. ವಿದೇಶಿ ಪ್ರಜೆಗಳು ಅಡುಗೆ ಮನೆಯಲ್ಲಿಯೇ ಡ್ರಗ್ಸ್​ ತಯಾರಿಸುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು.
ಈಗ ಪತ್ತೆಯಾಗಿರುವ ಘಟಕಗಳು ಈ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಆರೋಪಿಗಳು ಜನನಿಬಿಡ ವಸತಿ ಪ್ರದೇಶಗಳನ್ನೇ ತಮ್ಮ ಕೃತ್ಯಕ್ಕೆ ಅಡಗುದಾಣ ಮಾಡಿಕೊಳ್ಳುತ್ತಿದ್ದಾರೆ. ಮನೆ ಮಾಲೀಕರು ಹೆಚ್ಚಿನ ಬಾಡಿಗೆಯ ಆಸೆಗೆ ಬಿದ್ದು, ಬಾಡಿಗೆದಾರರ ಹಿನ್ನೆಲೆ ಅಥವಾ ದಾಖಲೆಗಳನ್ನು ಪರಿಶೀಲಿಸದೆ ಮನೆಗಳನ್ನು ನೀಡುತ್ತಿರುವುದು ಈ ಜಾಲ ಬೆಳೆಯಲು ಪರೋಕ್ಷವಾಗಿ ಸಹಕಾರಿಯಾಗಿದೆ. ಡ್ರಗ್ಸ್​ ತಯಾರಿಸುತ್ತಿದ್ದವರ ಚಲನವಲನಗಳನ್ನು ನೆರೆಹೊರೆಯವರು ಗಮನಿಸದಿರುವುದು ಅಥವಾ ದೂರು ನೀಡದಿರುವುದು ಅಪರಾಧಿಗಳಿಗೆ ವರದಾನವಾಗಿದೆ.
ಡ್ರಗ್ಸ್​ ಎಂಬ ವಿಷ ಅದನ್ನು ಸೇವಿಸುವ ವ್ಯಕ್ತಿಯನ್ನಷ್ಟೇ ಅಲ್ಲ, ಇಡೀ ಸಮಾಜವನ್ನೇ ನಾಶಪಡಿಸುತ್ತದೆ. ಸಿಂಥೆಟಿಕ್​ ಡ್ರಗ್​ಗಳಾದ ಎಂಡಿಎಂಎ ಅಥವಾ ಮೆಫೆಡ್ರೋನ್​ ಸೇವನೆಯಿಂದ ಮಿದುಳಿನ ಮೇಲೆ ದುಷ್ಪರಿಣಾಮ ಆಗುತ್ತದೆ. ಕಿಡ್ನಿ ವೈಫಲ್ಯ, ಹೃದಯಾಘಾತ, ಮಾನಸಿಕ ಅಸ್ವಸ್ಥತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬದುಕು ಹಳಿ ತಪ್ಪುತ್ತದೆ. ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುವುದಕ್ಕೂ ಇದು ಪರೋಕ್ಷವಾಗಿ ಕಾರಣವಾಗುತ್ತದೆ. ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಡ್ರಗ್ಸ್​ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆದಿರುವುದು ಶ್ಲಾಘನೀಯ. ಪಾರ್ಟಿಗಳಲ್ಲಿ ಯುವಜನರಿಗೆ ಹಂಚಲು ಸಿದ್ಧವಾಗುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಜಪ್ತಿ ಮಾಡುವ ಮೂಲಕ ಪೊಲೀಸರು ಅನಾಹುತವನ್ನು ತಪ್ಪಿಸಿದ್ದಾರೆ.
ಪೊಲೀಸ್​ ಇಲಾಖೆ ಕೇವಲ ಪೆಡ್ಲರ್​ಗಳನ್ನು ಬಂಧಿಸಿ ಕೈತೊಳೆದುಕೊಳ್ಳಬಾರದು. ಬದಲಿಗೆ, ಈ ಡ್ರಗ್ಸ್​ ಫ್ಯಾಕ್ಟರಿಗಳ ಮೂಲವನ್ನು ಪತ್ತೆ ಹಚ್ಚಬೇಕು. ಮನೆ ಮಾಲೀಕರು ಬಾಡಿಗೆಗೆ ನೀಡುವ ಮುನ್ನ ಕಡ್ಡಾಯವಾಗಿ ಹಿನ್ನೆಲೆ ಪರಿಶೀಲಿಸಬೇಕು. ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತ ನಡೆಯುವ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಡ್ರಗ್ಸ್​ ಹಾವಳಿ ನಿಯಂತ್ರಿಸಲು ಸರ್ಕಾರ, ಪೊಲೀಸರು ಮತ್ತು ನಾಗರಿಕರು ಜಂಟಿಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.