border fencing 
ರಾಜ್ಯ

ಸಂಪಾದಕೀಯ: ಗಡಿ ತಂಟೆಯ ಹೊಸ ರೂಪ

ಸಂಪಾದಕೀಯ: ಬೆಳಗಾವಿ ಗಡಿ ವಿವಾದವನ್ನು ಜೀವಂತವಾಗಿರಿಸಲು ದಶಕಗಳಿಂದಲೂ ಪ್ರಯತ್ನಿಸುತ್ತಿರುವ ಮಹಾರಾಷ್ಟ್ರದ ಚಾಳಿ ಈಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇದೀಗ ಬೆಳಗಾವಿಯಲ್ಲಿ "ಮಹಾರಾಷ್ಟ್ರ ಗಡಿ ಭವನ' ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದು ಕೇವಲ ಒಂದು ಕಟ್ಟಡ ನಿರ್ಮಾಣ ಎಂದು ರ್ನಿಕ್ಷಿಸುವ ಪ್ರಶ್ನೆಯೇ ಇಲ್ಲ. ಇದು ಕರ್ನಾಟಕದ ಸಾರ್ವಭೌಮತ್ವಕ್ಕೆ ಒಡ್ಡುತ್ತಿರುವ ಬಹಿರಂಗ ಸವಾಲು ಎಂದೇ ಕನ್ನಡಿಗರು ಪರಿಗಣಿಸಬೇಕಾಗಿದೆ.
1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಯಿತು. ಆದರೆ, ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ತನಗೆ ಸೇರಬೇಕೆಂದು ಮಹಾರಾಷ್ಟ್ರ ವಾದಿಸುತ್ತಿದೆ. ಕೇಂದ್ರ ಸರ್ಕಾರ ನೇಮಿಸಿದ ಮಹಾಜನ್​ ಸಮಿತಿಯು ಬೆಳಗಾವಿಯನ್ನು ಕರ್ನಾ0ಟಕದಲ್ಲೆ ಉಳಿಸಬೇಕು ಎಂದು 1966ರಲ್ಲಿಯೇ ಸ್ಪಷ್ಟವಾಗಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೂ, ಮಹಾರಾಷ್ಟ್ರ ಈ ವರದಿಯನ್ನು ತಿರಸ್ಕರಿಸಿ 2004ರಲ್ಲಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತು. ಮುಂದಿನ ತಿಂಗಳು ಸುಪ್ರೀಂ ಕೋರ್ಟ್​ನಲ್ಲಿ ಬೆಳಗಾವಿ ಗಡಿ ವಿವಾದದ ವಿಚಾರಣೆ ನಡೆಯಲಿದೆ. "ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯವಿದ್ದು ಅಲ್ಲಿ ತಮ್ಮ ಸಾಂಸ್ಕೃತಿಕ ಕೇಂದ್ರವೂ ಇದೆ' ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸುವುದು ಮಹಾರಾಷ್ಟ್ರದ ಕುತಂತ್ರ. ಈ ಭವನ ನಿರ್ಮಿಸುವ ಮೂಲಕ ಬೆಳಗಾವಿಯ ಜನರನ್ನು ಮರಾಠಿಗರೆಂದು ಬಿಂಬಿಸಿ, ಭಾಷಾ ಸಂಘರ್ಷವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಮಹಾರಾಷ್ಟ್ರದ ನಾಯಕರ ಮುಖ್ಯ ಗುರಿ. ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಗಡಿ ಭಾಗದ ಮರಾಠಿ ಶಾಲೆಗಳು ಮತ್ತು ಸಂಸ್ಥೆಗಳಿಗೆ ಈಗಾಗಲೇ ಕೋಟ್ಯಂತರ ರೂ. ಅನುದಾನ ನೀಡುತ್ತ ಬಂದಿದೆ. ಈಗ ಭವನದ ಮೂಲಕ ತನ್ನ ಅನಪೇಕ್ಷಿತ ಹಸ್ತಕ್ಷೇಪವನ್ನು ಕಾನೂನುಬದ್ಧಗೊಳಿಸಲು ಯತ್ನಿಸುತ್ತಿದೆ.
ಕರ್ನಾಟಕವು ತನ್ನ ಗಡಿ ಪ್ರದೇಶದಲ್ಲಿ ನೆರೆರಾಜ್ಯದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ರಾಜ್ಯ ಸರ್ಕಾರ ಈ ಕುರಿತು ತಕ್ಷಣವೇ ಕೇಂದ್ರ ಸರ್ಕಾರಕ್ಕೆ ದೂರು ನೀಡಬೇಕು. ಸುಪ್ರೀಂ ಕೋರ್ಟ್​ನಲ್ಲಿಯೂ ಮಹಾರಾಷ್ಟ್ರದ ನಡೆಯನ್ನು ಪ್ರಸ್ತಾಪಿಸಿ ಪ್ರಬಲ ವಾದ ಮಂಡಿಸಬೇಕು. ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಈಗಾಗಲೇ ಪ್ರತಿ ವರ್ಷ ಚಳಿಗಾಲದ ಅಧಿವೇಶನ ನಡೆಸುತ್ತಿದೆ. ಇಷ್ಟಕ್ಕೇ ಸೀಮಿತವಾಗದೆ, ಗಡಿ ಭಾಗದ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಡಿ ಇಡಬೇಕು. ಮಹಾರಾಷ್ಟ್ರದ ಇಂತಹ ಉಪದ್ಪ್ಯಾಯಪಗಳಿಗೆ ಕಡಿವಾಣ ಹಾಕದಿದ್ದರೆ, ಇದು ಭವಿಷ್ಯದಲ್ಲಿ ಗಂಭೀರ ಕಾನೂನು ಸುವ್ಯವಸ್ಥೆಯ ಸಮಸ್ಯೆಗೂ ಕಾರಣವಾಗಬಹುದು. ಬೆಳಗಾವಿಯಲ್ಲಿ ತಲೆತಲಾಂತರಗಳಿಂದಲೂ ಶಾಂತಿ&ಸೌಹಾರ್ದದಿಂದ ವಾಸಿಸುತ್ತಿರುವ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಇದು ಕಂದಕ ನಿರ್ಮಿಸಬಹುದು. ಇಂತಹ ದುಸ್ಸಾಹಸ ಮಾಡುವುದಕ್ಕೆ ಯಾರಿಗೂ ಅವಕಾಶ ನೀಡಬಾರದು. ಗಡಿ ಎಂಬುದು ಕೇವಲ ಒಂದು ಗೆರೆಯಲ್ಲ, ಅದು ರಾಜ್ಯದ ಅಸ್ಮಿತೆ. ಮಹಾರಾಷ್ಟ್ರ ಮಾಡುತ್ತಿರುವ ಈ ಹಸ್ತೇಪವನ್ನು ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕು. ಶಾಂತಿ ಮತ್ತು ಸೌಹಾರ್ದಕ್ಕೆ ಹೆಸರಾದ ಕರ್ನಾಟಕದಲ್ಲಿ ಭಾಷಾ ದ್ವೇಷ ಬಿತ್ತುವ ಯಾವುದೇ ಪ್ರಯತ್ನಕ್ಕೆ ಆಸ್ಪದ ನೀಡಬಾರದು.