ಬೆಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ದಾಳಿ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸಾಮ್ರಾಜ್ಯದಲ್ಲಿ ವಿದೇಶಿ ಹೂಡಿಕೆ ಸೇರಿ ವಿವಿಧ ಕಡೆ 3.30 ಕೋಟಿ ರೂ. ನಗದು ಪತ್ತೆಯಾಗಿರುವ ಬೆನ್ನಲ್ಲೇ ವಿಶೇಷ ತನಿಖೆ ನಡೆಯುವುದು ಬಹುತೇಕ ಖಚಿತವಾಗಿದೆ. ದೆಹಲಿ ಕೇಂದ್ರ ಕಚೇರಿಯ ನಿರ್ದೇಶಕ ರಾಹುಲ್ ನವೀನ್ ಅವರೇ ಖುದ್ದು ಬೆಂಗಳೂರಿಗೆ ಆಗಮಿಸಿ ಕರ್ನಾಟಕದಲ್ಲಿ ನಡೆದಿರುವ ಪ್ರಮುಖ ಇ.ಡಿ. ಪ್ರಕರಣಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಶನಿವಾರ ಸಂಜೆಯೇ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಅವರು, ಶಾಂತಿನಗರದಲ್ಲಿರುವ ಇ.ಡಿ. ಕಚೇರಿಗೆ ಭೇಟಿ ನೀಡಿ ನಂತರ ತೆರಳಿದರು. ಎರಡು ದಿನಗಳ ಕಾಲ ಇಲ್ಲಿಯೇ ಉಳಿದುಕೊಳ್ಳಲಿರುವ ರಾಹುಲ್ ನವೀನ್, ಬೆಂಗಳೂರು ವಲಯದ ಇ.ಡಿ. ಅಧಿಕಾರಿಗಳ ಜತೆ ಸತೀಶ್ ಜಾರಕಿಹೊಳಿ ಪ್ರಕರಣ ಮಾತ್ರವಲ್ಲದೆ, ರಾಜ್ಯದಲ್ಲಿ ದಾಖಲಾಗಿರುವ ಹೈಪ್ರೊಫೈಲ್ ಪ್ರಕರಣಗಳ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಜತೆಗೆ ಪ್ರತಿ ಪ್ರಕರಣದಲ್ಲಿ ಇದುವರೆಗಿನ ಬೆಳವಣಿಗೆಗಳು, ಶಿಕ್ಷೆಯ ಪ್ರಮಾಣ, ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಗೋಕಾಕ್ ಮತ್ತು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ದೊರೆತ ಕೋಟ್ಯಂತರ ರೂ. ನಗದು, 15 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಕುರಿತು ಕೇಂದ್ರ ಕಚೇರಿಗೆ ಇ.ಡಿ. ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಣದ ಮೂಲ ಹಾಗೂ ವಿದೇಶಿ ಹೂಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಆಫ್ರಿಕಾದಲ್ಲಿ ಸತೀಶ್ ಜಾರಕಿಹೊಳಿ, ಅವರ ಪುತ್ರ ರಾಹುಲ್, ಸಹೋದರ ಬಾಲಚಂದ್ರ ಜಾರಕಿಹೊಳಿ ಹೆಸರಿನಲ್ಲಿ ಹೂಡಿಕೆ ಬಗ್ಗೆ ದಾಖಲೆ ಪತ್ತೆ ಮಾಡಿರುವ ಇ.ಡಿ., ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ-1999ರ (ಫೆಮಾ) ಅನ್ವಯ ತನಿಖೆ ನಡೆಸಲಿದೆ. ಫೆಮಾ ಕಾಯ್ದೆ ಉಲ್ಲಂಘಿಸಿ ಜಾರಕಿಹೊಳಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಇ.ಡಿ. ಶೀಘ್ರದಲ್ಲೇ ಸತೀಶ್ ಜಾರಕಿಹೊಳಿ, ಅವರ ಕುಟುಂಬಸ್ಥರು, ಸಂಬಂಧಿಕರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಲೋಕಾಯುಕ್ತ ಮೊರೆ?
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಮಂತ್ರಿಗಳ ವಿರುದ್ಧ ನೇರವಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಇ.ಡಿ. ಸಂಸ್ಥೆಗೆ ಅಧಿಕಾರವಿಲ್ಲ. ಈ ಹಿನ್ನೆಲೆ ಪತ್ತೆಯಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ, ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆಯಲು ಇ.ಡಿ. ಮುಂದಾಗಿದೆ ಎನ್ನಲಾಗಿದೆ.
ಹವಾಲಾ ದಂಧೆ ಗುಮಾನಿ: ವಿದೇಶದಲ್ಲಿ ಮೈನಿಂಗ್, ಚಿನ್ನದ ಗಣಿಗಾರಿಕೆಯಲ್ಲಿ ಪಾಲು ಹೊಂದಿರುವ ಬಗ್ಗೆ ತನಿಖೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು, ಜಾರಕಿಹೊಳಿ ಹವಾಲಾ ಮೂಲಕ ಭಾರಿ ಪ್ರಮಾಣದ ಹಣ ಆಫ್ರಿಕಾಕ್ಕೆ ಸಾಗಣೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ವಿವಿಧ ಬ್ಯಾಂಕ್ಗಳ ಮೂಲಕ ಅಕ್ರಮವಾಗಿ ನೂರಾರು ಕೋಟಿ ರೂ. ವರ್ಗಾವಣೆ ಮಾಡಿರುವ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಇಸಿಐಆರ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಇ.ಡಿ. ಮುಂದಾಗಿದೆ. ಸಾವಿರಾರು ಕೋಟಿ ರೂ. ನಗದು ಹಣವನ್ನು ವಿದೇಶಿ ಏಜೆಂಟರ ಮೂಲಕ ಕಳುಹಿಸಿರುವ ಆರೋಪ ಸತೀಶ್ ಜಾರಕಿಹೊಳಿ ಮೇಲಿದೆ ಎನ್ನಲಾಗಿದೆ.
ಬಿವಿಇಪಿಎಲ್ ಕಂಪನಿಗೆ ಟೆಂಡರ್?: ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಯಲಿಗೆಳೆದಿರುವ ಇ.ಡಿ., ರಾಜ್ಯದ ವಿವಿಧ ಹೆದ್ದಾರಿ, ಬೃಹತ್ ಯೋಜನೆಗಳು ಹಾಗೂ ಸಾವಿರಾರು ಕೋಟಿ ಮೌಲ್ಯದ ಕಾಮಗಾರಿಗಳ ಟೆಂಡರ್ ಅನ್ನು "ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ಗೆ (ಬಿವಿಇಪಿಎಲ್)" ನೀಡಲು ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿರುವ ಇ.ಡಿ. ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಎಲ್ಲಿಯ ಕಂಪನಿ? ಏನು ಕತೆ?: ಬಿವಿಇಪಿಎಲ್ ಕಂಪನಿ ಕೋಲ್ಕತಾ, ಪಶ್ಚಿಮ ಬಂಗಾಳ ಮೂಲದ್ದಾಗಿದೆ. ಈ ಕಂಪನಿಯು ರಸ್ತೆಗಳು, ಹೆದ್ದಾರಿ, ಪ್ರಮುಖ ಸೇತುವೆ ನಿರ್ಮಿಸುತ್ತದೆ. ಅಲ್ಲದೆ ಈ ಕಂಪನಿ ದೇಶದ ವಿವಿಧ 25 ವಲಯಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ. ಅಸ್ಸಾಂ, ಜಾರ್ಖಂಡ್, ಮಣಿಪುರ, ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚು ಸಕ್ರಿಯವಾಗಿದೆ. ಸತೀಶ್ ಜಾರಕಿಹೊಳಿ ಕೋಲ್ಕತಾದಲ್ಲಿ ಆಸ್ತಿ ಹೊಂದಿರುವುದನ್ನು ಇ.ಡಿ. ಪತ್ತೆ ಮಾಡಿದೆ. ಆದ್ದರಿಂದ ಆ ರಾಜ್ಯದ ಬಿವಿಇಪಿಎಲ್ ಕಂಪನಿಗೆ ಕರ್ನಾಟಕದ ವಿವಿಧ ಜಿಲ್ಲೆ, ಗಡಿ ಪ್ರದೇಶದಲ್ಲಿನ ಪ್ರಮುಖ ಹೆದ್ದಾರಿ, ರಸ್ತೆ ಕಾಮಗಾರಿಗಳ ಟೆಂಡರ್ ನೀಡಲು ಜಾರಕಿಹೊಳಿ ಮುಂದಾಗಿದ್ದರು. ನೂರಾರು ಕೋಟಿ ರೂ. ಮೌಲ್ಯದ ಟೆಂಡರ್ ಈ ಕಂಪನಿಗೆ ನೀಡಲು ಲಂಚದ ರೂಪದಲ್ಲಿ ಕೋಟ್ಯಂತರ ರೂ. ಹಣ ಪಡೆದಿದ್ದಾರೆ ಎಂಬ ಆರೋಪಗಳಿವೆ. ಈ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆಯಾಮದಲ್ಲಿ ಇ.ಡಿ. ತನಿಖೆ ನಡೆಸಲಿದೆ.