ಕೆಪಿಎಸ್‌ಸಿ ಅಕ್ರಮ ನೇಮಕಾತಿ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿದಂತೆ 21 ಕಡೆ ಇಡಿ ದಾಳಿ! 
ರಾಜ್ಯ

ಕೆಪಿಎಸ್‌ಸಿ ಅಕ್ರಮ ನೇಮಕಾತಿ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿದಂತೆ 21 ಕಡೆ ಇಡಿ ದಾಳಿ!

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿದಂತೆ 21 ಕಡೆ ಇಡಿ ದಾಳಿ
  • ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್​ಸಿ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ
  • ಅಭ್ಯರ್ಥಿಗಳಿಂದ ಲಕ್ಷಾಂತರ ಲಂಚ ಪಡೆದು ಓಎಂಆರ್ ಶೀಟ್ ತಿರುಚಿದ ಗಂಭೀರ ಆರೋಪ
  • ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಶಕ್ಕೆ
ಬೆಂಗಳೂರು: ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಲೋಕಸೇವಾ ಆಯೋಗದ ( KPSC ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್​ ಶಾಕ್​ ನೀಡಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ಶಂಕೆಯ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಶಿವಶಂಕರಪ್ಪ ಅವರ ಫ್ಲಾಟ್ ಸೇರಿದಂತೆ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಹಾಗೂ ಗುಜರಾತ್‌ನ ಅಹಮದಾಬಾದ್ ಸೇರಿದಂತೆ ಒಟ್ಟು 21 ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೆಗಾ ದಾಳಿ ನಡೆಸಿದ್ದಾರೆ. ಸ್ವತಃ ಕೆಪಿಎಸ್‌ಸಿ ಕಚೇರಿ, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಶಾಂತಾ ಹೊಸಮನಿ, ಹಗರಣದ ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೌಲ್ಯಮಾಪನ ಸಂಸ್ಥೆಯಾದ ‘M/s ಎಡುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಚೇರಿ ಹಾಗೂ ಆಯ್ಕೆಯಾದ ಕೆಲ ಅಭ್ಯರ್ಥಿಗಳ ಮನೆಗಳ ಮೇಲೆ ಸಿಆರ್‌ಪಿಎಫ್ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ.
ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲು ಮಧ್ಯವರ್ತಿಗಳು ಪ್ರತಿ ಅಭ್ಯರ್ಥಿಯಿಂದ 70 ರಿಂದ 80 ಲಕ್ಷ ರೂಪಾಯಿಗಳವರೆಗೆ ಡಿಮ್ಯಾಂಡ್ ಮಾಡಿದ್ದರು ಎಂಬ ಗಂಭೀರ ಆರೋಪವಿದೆ. ರೆಸಾರ್ಟ್‌ಗಳಲ್ಲಿ ರಹಸ್ಯವಾಗಿ ಪ್ರಶ್ನೆಪತ್ರಿಕೆ ಹಂಚಿಕೆ, ಓಎಂಆರ್ (OMR) ಶೀಟ್‌ಗಳ ತಿದ್ದುಪಡಿ ಹಾಗೂ ಅಧಿಕಾರಿಗಳ ಕಡೆಯಿಂದಲೇ ಅಭ್ಯರ್ಥಿಗಳ ಮೊಬೈಲ್ ನಂಬರ್‌ಗಳನ್ನು ಮಧ್ಯವರ್ತಿಗಳಿಗೆ ಸೋರಿಕೆ ಮಾಡಲಾಗಿದೆ ಎಂಬ ಸ್ಫೋಟಕ ಸಂಗತಿಗಳು ಬಯಲಾಗಿವೆ. ಈ ಅಕ್ರಮದ ಮೂಲಕ ಸಂಗ್ರಹಿಸಿದ ಕೋಟ್ಯಂತರ ಹಣವನ್ನು ಹವಾಲಾ ಮಾರ್ಗದ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಶಂಕೆಯ ಮೇರೆಗೆ ಇಡಿ ಈ ತನಿಖೆಯನ್ನು ಚುರುಕುಗೊಳಿಸಿದೆ.
ಪಶುಸಂಗೋಪನೆ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗೆ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಶಿವಶಂಕರಪ್ಪ ಸಾಹುಕಾರ್ ಅವರ ಮಗಳು ಸುಮ ಸಾಹುಕಾರ್ ವಿರುದ್ಧವೂ ಜುಲೈ 10ರಂದೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೆಪಿಎಸ್‌ಸಿ ಅಧಿಕಾರಿಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಸರ್ಕಾರವು ಈ ಪ್ರಕರಣದ ಸಮಗ್ರ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ (CID) ವಹಿಸಿತ್ತು. ಸಿಐಡಿ ತನಿಖೆ ತೀವ್ರಗೊಂಡ ಬೆನ್ನಲ್ಲೇ ಕಣಕ್ಕಿಳಿದಿರುವ ಇಡಿ ಅಧಿಕಾರಿಗಳು, ಈಗ ಆರ್ಥಿಕ ಅಪರಾಧಗಳ ಕೊಂಡಿಯನ್ನು ಶೋಧಿಸಲು ಮುಂದಾಗಿದ್ದಾರೆ.
ಇಡಿ ಅಧಿಕಾರಿಗಳು ಅತ್ಯಂತ ತಂತ್ರಗಾರಿಕೆಯಿಂದ ಈ ದಾಳಿ ನಡೆಸಿದ್ದು, ಮುಂಜಾನೆಯೇ ದಾಳಿ ಮಾಡಿದರೆ ಸಿಬ್ಬಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಕರ್ತವ್ಯಕ್ಕೆ ಹಾಜರಾದ ಬಳಿಕ, ಅಂದರೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ಕೆಪಿಎಸ್‌ಸಿ ಕಚೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಒಟ್ಟು 15ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೆಪಿಎಸ್​ಸಿ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ವಿಚಾರಣೆಗೆ ಸೂಕ್ತ ರೀತಿಯಲ್ಲಿ ಸಹಕರಿಸದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಇಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಪೂರ್ಣ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 4 ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಒಎಂಆರ್ ಶೀಟ್ ತಿರುಚಿದ ಜಾಲ, ಉನ್ನತ ಅಧಿಕಾರಿಗಳ ನಂಟು ಮತ್ತು ಕೆಪಿಎಸ್‌ಸಿ ಒಳಚರಿತ್ರೆಯ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿವೆ. ಹೊಯ್ಸಳ ಡ್ರೀಮ್ಸ್ ಅಪಾರ್ಟ್‌ಮೆಂಟ್‌ನ ಪ್ಲಾಟ್ ನಂಬರ್ 304ರಲ್ಲಿರುವ ಶಿವಶಂಕರಪ್ಪ ಅವರ ನಿವಾಸದಲ್ಲಿ ದಾಖಲೆಗಳ ಶೋಧ ಕಾರ್ಯ ತೀವ್ರಗೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ರೋಚಕ ಹಾಗೂ ಶಾಕಿಂಗ್ ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.

ಇಡಿ ದಾಳಿ ಸ್ವಾಗತಿಸಿದ ಆರ್​. ಅಶೋಕ್

ಕರ್ನಾಟಕ ಲೋಕಸೇವಾ ಆಯೋಗದ (KPSC) ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ದಾಳಿಯನ್ನು ವಿಪಕ್ಷ ನಾಯಕ ಆರ್. ಅಶೋಕ್ ಬಲವಾಗಿ ಸ್ವಾಗತಿಸಿದ್ದಾರೆ. ಈ ಹಿಂದೆ ವಿಧಾನಸಭೆಯಲ್ಲಿ ತಾವು ಸುಮಾರು ಎರಡು ದಿನಗಳ ಕಾಲ ಕೆಪಿಎಸ್‌ಸಿ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಎಳೆ ಎಳೆಯಾಗಿ ಬಿಡಿಸಿ ಮಾತನಾಡಿದ್ದಾಗಿ ಅವರು ನೆನಪಿಸಿದ್ದಾರೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕೇವಲ 8 ಜನ ಕೆಪಿಎಸ್‌ಸಿ ಸದಸ್ಯರಿದ್ದರೆ, ನಮ್ಮ ರಾಜ್ಯದಲ್ಲಿ ಡಜನ್‌ಗಟ್ಟಲೆ ಅಂದರೆ 18ಕ್ಕೂ ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ಸರ್ಕಾರವು ಲೂಟಿ ಮಾಡುವುದಕ್ಕಾಗಿಯೇ ಹುದ್ದೆಗಳ ಸಂಖ್ಯೆಯನ್ನು ಜಾಸ್ತಿ ಮಾಡಿಕೊಂಡಿದೆ ಎಂದು ಅಶೋಕ್​ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ, ಲಂಚದ ಹಾವಳಿ ಮತ್ತು ಆಡಿಯೋ ಲೀಕ್ ಪ್ರಕರಣಗಳ ಸರಣಿಯೇ ನಡೆದಿರುವುದಾಗಿ ಆರ್. ಅಶೋಕ್ ಕಿಡಿಕಾರಿದ್ದಾರೆ. ಪಶುವೈದ್ಯರ ಹುದ್ದೆಗಳಿಂದ ಹಿಡಿದು ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ನೇಮಕಾತಿವರೆಗೂ 70ರಿಂದ 80 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಲಂಚ ಪಡೆಯಲಾಗಿದೆ ಎಂದು ಅಶೋಕ್​ ಅವರು ದೂರಿದ್ದಾರೆ. ಈ ಹಿಂದೆಯೇ ತಾವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿದ್ದರೂ ಸರ್ಕಾರ ಒಪ್ಪಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಒಂದು ವೇಳೆ ಸಿಬಿಐ ತನಿಖೆಗೆ ಒಪ್ಪಿಸಿದ್ದರೆ ಹಗರಣದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಜೈಲು ಸೇರುತ್ತಿದ್ದರು, ಆದರೆ ಪ್ರಸ್ತುತ ಸರ್ಕಾರ ಎಲ್ಲವನ್ನೂ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಕ್ರಮವಾಗಿ ಲೂಟಿ ಮಾಡಿದ ಸರ್ಕಾರದ ಹಣವನ್ನು ಮರಳಿ ಖಜಾನೆಗೆ ತರುವ ಸತ್ಕಾರ್ಯವನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಾಡುತ್ತಿದ್ದು, ಇದು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವ ದಿಸೆಯಲ್ಲಿ ಅತ್ಯಂತ ಶ್ಲಾಘನೀಯ ಹೆಜ್ಜೆ ಎಂದು ಆರ್. ಅಶೋಕ್ ಬಣ್ಣಿಸಿದ್ದಾರೆ. ತಪ್ಪು ಮಾಡಿದವರು ಯಾರೇ ಆಗಲಿ ಕಾನೂನಿನ ಬಲೆಗೆ ಬೀಳಬೇಕು ಮತ್ತು ಕಠಿಣ ಶಿಕ್ಷೆಗೆ ಗುರಿಯಾಗಬೇಕು ಎಂಬುದು ತಮ್ಮ ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿರುವ ಅವರು, ಸದ್ಯ ನಡೆದಿರುವ ಈ ಮೆಗಾ ದಾಳಿಯನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.