suspected-terrorist 
ರಾಜ್ಯ

ಶಂಕಿತ ಉಗ್ರರು, ಖಾಸಗಿ ಸಂಸ್ಥೆ ಸೇರಿ 8 ಕಡೆ ಇ.ಡಿದಾಳಿ

ಪ್ರಮುಖ ಮುಖ್ಯಾಂಶಗಳು

  • ಐಸಿಸ್ ಉಗ್ರ ಸಂಘಟನೆ ಆರ್ಥಿಕ ನೆರವು
  • ದಾಳಿ ವೇಳೆ ಕೆಲ ತಾಂತ್ರಿಕ ಮಾಹಿತಿ ಸಂಗ್ರಹ
ಬೆಂಗಳೂರು: ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಹಾಗೂ ಭಯೋತ್ಪಾದಕ ಸಂಘಟನೆಗೆ ಹಣ ಪೂರೈಕೆ ಮಾಡಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಮಂಗಳವಾರ ಬೆಂಗಳೂರಿನ 8 ಕಡೆಗಳಲ್ಲಿ ದಾಳಿ ನಡೆಸಿ ಶೋಧಿಸಿದ್ದಾರೆ.
ನಗರದ ಸದ್ದುಗುಂಟೆಪಾಳ್ಯ, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಕಮ್ಮನಹಳ್ಳಿ ಸೇರಿ 8 ಕಡೆಗಳಲ್ಲಿ ದಾಳಿ ನಡೆಸಿ, ಐಸಿಸ್ ಸಂಘಟನೆಗೆ ಆರ್ಥಿಕ ನೆರವು ನೀಡಿದ ಆರೋಪದ ಮೇರೆಗೆ ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್‌ಕೈಂಡ್ ಸಂಸ್ಥೆ ಹಾಗೂ ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಕಳೆದ 2020ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, ಐಸಿಸ್ ಉಗ್ರ ವೈದ್ಯ ಡಾ ಅಬ್ದುರ್ ರೆಹಮಾನ್ ಮತ್ತು ಇಕ್ರಾ ವೆಲ್ಫೇರ್ ಟ್ರಸ್ಟ್ ಸಂಸ್ಥೆ ಉಸ್ತುವಾರಿ ವಹಿಸಿದ್ದ ಇರ್ಫಾನ್ ನಾಸೀರ್ ಸೇರಿ ಐವರು ವಿರುದ್ಧ ಮೂರು ವರ್ಷಗಳ ಹಿಂದೆ ಆರೋಪಪಟ್ಟಿ ಸಲ್ಲಿಸಿದ್ದರು.
ಈ ವೇಳೆ ಆರೋಪಿ ಸಂಸ್ಥೆಗಳು ನಿಯಮ ಬಾರಹಿರವಾಗಿ ವಿದೇಶಿ ವಹಿವಾಟಿನ ಬಗ್ಗೆ ಹಾಗೂ ಆರೋಪಿತ ವ್ಯಕ್ತಿಗಳು, ಇಕ್ರಾ ಕ್ಯಾಂಪ್ ಎಂಬ ಕಾರ್ಯಾಗಾರ ಮೂಲಕ ಕುರಾನ್ ಸರ್ಕಲ್ ಸಾಮೂಹಿಕ ಅಧ್ಯಯನ ಕೂಟದ ಮೂಲಕ ಉಗ್ರ ಸಂಘಟನೆಗೆ ಮುಸ್ಲಿಂ ಯುವಕರನ್ನು ಸೇರಿಸಲು ಪ್ರಚೋದನೆ ನೀಡುತ್ತಿದ್ದರು. ಸಂಘಟನೆಗೆ ಸೇರಿ ಯುವಕರನ್ನು ಟರ್ಕಿ ಮೂಲಕ ಸಿರಿಯಾಗೆ ಕಳುಹಿಸಿ ಸಂಘಟನೆಗೆ ಸೇರಿಸುತ್ತಿದ್ದರು ಎಂದು ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೆ, ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ವೇಳೆಯೂ ಐಸಿಸ್ ಸಿದ್ಧಾಂತವನ್ನು ಹರಡಲು ಮುಂದಾಗಿದ್ದರು ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಬಳಿಕ ಇಡಿ ತನಿಖೆ ಆರಂಭಿಸಿದಾಗ ಪ್ರಕರಣದ ಐವರು ಆರೋಪಿಗಳು ಸ್ಥಾಪಿಸಿರುವ ಸಂಸ್ಥೆಗೆ ವಿದೇಶದಿಂದ ಹಣ ಬರುತ್ತಿತ್ತು. ಜತೆಗೆ ವಿದೇಶದಲ್ಲೂ ಇವರು ಆಸ್ತಿ ಹೊಂದಿದ್ದಾರೆ ಎಂಬುದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ನೇತ್ರತಜ್ಞನಾಗಿದ್ದ ವೈದ್ಯ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿದ್ದ ಅಬ್ದುರ್ ರೆಹಮಾನ್ ಐಸಿಸ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ. ಸಿರಿಯಾದಲ್ಲಿರುವ ಉಗ್ರರ ಜತೆ ಸಂವಹನ ನಡೆಸಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಿದ್ದ, ಅಲ್ಲದೇ ವೈದ್ಯಕೀಯ ನೆರವು ನೀಡುತ್ತಿದ್ದ ಎಂಬ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿತ್ತು. ಈತನ ವಿರುದ್ಧ 2021ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ನಂತರದ ತನಿಖೆಯಲ್ಲಿ ಈತನ ಜತೆ ಇರ್ಫಾನ್ ನಾಸೀರ್, ಮೊಹಮದ್ ತಾಖೀರ್, ಝೋಯೇಬ್ ಮುನ್ನಾ, ಮೊಹಮದ್ ಸಾಹಿಬ್, ಅಹಮದ್ ಅಬ್ದುಲ್ ಕೇಡರ್ ಎಂಬವರು ಇಕ್ರಾ ಕ್ಯಾಂಪ್ ಮೂಲಕ ಮುಸ್ಲಿಂ ಯುವಕರನ್ನು ಸಂಘಟನೆಗೆ ಸೇರಿಸುತ್ತಿದ್ದರು ಎಂಬುದು ತಿಳಿದಿದೆ. ವಿದೇಶಿ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿದ ಇ.ಡಿ ಇದೀಗ ದಾಳಿ ನಡೆಸಿ ಕೆಲವೊಂದು ದಾಖಲೆಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.