ಬೆಂಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ (ಎಡಿಸಿಎಲ್) 14.95 ಕೋಟಿ ರೂ. ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಐವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಬೆಂಗಳೂರು ವಲಯ ಕಚೇರಿಯ ಇಡಿ ಅಧಿಕಾರಿಗಳು ಅ.5ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ಪೂರಕ ದೂರು ಸಲ್ಲಿಸಿದೆ. ಆರೋಪಿ ಅಯೂಬ್ ಸಯ್ಯದ್ ಸೇರಿ ಐವರು ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಇ.ಡಿ.ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರೀಯ ತನಿಖಾ ದಳದ (ಸಿಬಿಐ) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬೆಂಗಳೂರು ಘಟಕ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಇ.ಡಿ. ತನಿಖೆ ಆರಂಭಿಸಿತ್ತು. ಭಾರತೀಯ ದಂಡ ಸಂಹಿತೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ-1988ರ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ನಗರದ ಹೆಚ್ಎಎಲ್ ಎರಡನೇ ಹಂತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆಯೊಂದನ್ನು ತೆರೆಯಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ತೆರೆದು ಅಕ್ರಮ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ನಿಗಮಕ್ಕೆ ಸೇರಿದ ತಲಾ 5 ಕೋಟಿಯ ನಾಲ್ಕು ಸ್ಥಿರ ಠೇವಣಿಗಳಿದ್ದವು. 20 ಕೋಟಿ ಮೌಲ್ಯದ ಠೇವಣಿಗಳ ಅವಧಿ ಮುಗಿಯುವ ಮೊದಲೇ ನಕಲಿ ಟಮ್ ಡೆಪಾಸಿಟ್ ರಸೀದಿ (ಟಿಡಿಆರ್) ಹಾಗೂ ಸ್ಥಿರ ಠೇವಣಿ ರಸೀದಿ (ಎಫ್ಡಿಆರ್) ಹಾಗೂ ನಕಲಿ ಪತ್ರಗಳನ್ನು ಬಳಸಿ 14.95 ಕೋಟಿ ಹಣ ಅಕ್ರಮವಾಗಿ ವರ್ಗಾಯಿಸಿ ದುರುಪಯೋಗಪಡಿಸಿಕೊಳ್ಳಲಾಗಿದೆ. ವಂಚನೆಯಿಂದ ಪಡೆದ ಹಣದ ಮೂಲವನ್ನು ಮರೆಮಾಚಲು ಆರೋಪಿಗಳು ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬ್ಯಾಂಕ್ ಖಾತೆ ಬಳಸಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಈ ಹಿಂದೆಯೇ ತನಿಖೆ ನಡೆಸಿದ್ದ ಇ.ಡಿ., 2026ರ ಮಾರ್ಚ್ 25ರಂದು ಬೆಂಗಳೂರಿನ ಪಿಎಂಎಲ್ಎ ವಿಶೇಷ ನ್ಯಾಯಾಲಯಕ್ಕೆ 15 ಆರೋಪಿಗಳು ಮತ್ತು ಸಂಸ್ಥೆಗಳ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆರೋಪಿಗಳಿಗೆ ಸೇರಿದ ಸುಮಾರು 6.02 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ಇದಲ್ಲದೆ, 2026ರ ಜುಲೈ 22ರಂದು ಮತ್ತೊಂದು ತಾತ್ಕಾಲಿಕ ಆಸ್ತಿ ಜಪ್ತಿ ಆದೇಶ ಹೊರಡಿಸಲಾಗಿತ್ತು. ಇದರಡಿ ಆರೋಪಿಗಳ ಪೈಕಿ ಒಬ್ಬರಿಗೆ ಸೇರಿದ 24 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಈಗ ಇದೇ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.