ಸರಗೂರು ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟ ಹಾಗೂ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಬಿನಿ ಬಲದಂಡೆ ನಾಲೆ ಮೇಲಿನ ಸೇತುವೆ ಕುಸಿದಿರುವುದು.
- ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಕ್ಕದೇವಮ್ಮನ ಬೆಟ್ಟ
- ಕಬಿನಿ ಬಲದಂಡೆ ನಾಲೆ ಸೇತುವೆ ಕುಸಿದು ಬಿದ್ದು ವರ್ಷ
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕದೇವಮ್ಮನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಕಬಿನಿ ಬಲದಂಡೆ ನಾಲೆ ಸೇತುವೆ ಕುಸಿದು ಬಿದ್ದು ವರ್ಷ ಕಳೆದರೂ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೇತುವೆ ಕುಸಿದ ಪರಿಣಾಮ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳುವ ಸಾವಿರಾರು ಭಕ್ತರು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗುವ ಕಾರಣ ಪರ್ಯಾಯ ಮಾರ್ಗದಲ್ಲಿ ಸಂಚಾರವೂ ಅಪಾಯಕಾರಿಯಾಗಿದೆ. ಇದರಿಂದ ವಾಹನ ಸವಾರರು ಹಲವು ಕಿಲೋಮೀಟರ್ ಸುತ್ತಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆ ಕುಸಿದ ಕೂಡಲೇ ಶಾಸಕರು ಮತ್ತು ಅಧಿಕಾರಿಗಳು ಭೇಟಿ ನೀಡಿ ಶೀಘ್ರ ಹೊಸ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ರಸ್ತೆ ಚಿಕ್ಕದೇವಮ್ಮನ ದೇವಸ್ಥಾನಕ್ಕೆ ಮಾತ್ರವಲ್ಲದೆ ಹಲವು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕಲ್ಪಿಸಲಿದೆ. ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸಲು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹಾಗೂ ತುರ್ತು ಆರೋಗ್ಯ ಸೇವೆ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ಮಂಗಳವಾರ, ಶುಕ್ರವಾರ , ವಿಶೇಷ ಜಾತ್ರೆ ಮತ್ತು ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಭಕ್ತರು ಚಿಕ್ಕದೇವಮ್ಮನ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಸೇತುವೆ ಇಲ್ಲದ ಕಾರಣ ಭಕ್ತರು ಮತ್ತು ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ಹೆಚ್ಚು ದೂರ ಸುತ್ತಿಕೊಂಡು ಹೋಗಬೇಕಾಗಿದೆ. ಮಳೆಗಾಲದಲ್ಲಿ ಈ ತೊಂದರೆ ಇನ್ನಷ್ಟು ಹೆಚ್ಚಾಗಲಿದ್ದು, ತುರ್ತು ಸೇವೆಗಳಾದ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ.
ಈ ಸೇತುವೆ ಕೇವಲ ರಸ್ತೆ ಸಂಪರ್ಕವಲ್ಲ. ಬದಲಾಗಿ ಹಲವು ಗ್ರಾಮಗಳ ಜೀವನಾಡಿಯಾಗಿದೆ. ಆದ್ದರಿಂದ ಸರ್ಕಾರ ಮತ್ತು ಕಬಿನಿ ನೀರಾವರಿ ಇಲಾಖೆ ತಕ್ಷಣ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ಸೇತುವೆ ಮಾರ್ಗವಾಗಿ ಚಿಕ್ಕದೇವಮ್ಮನ ಬೆಟ್ಟ, ಹೂವಿನಕೊಳ, ಹುಣಸಹಳ್ಳಿ, ಮನುಗನಹಳ್ಳಿ, ಲಂಕೆ ಮಾರ್ಗವಾಗಿ ನಂಜನಗೂಡು ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದ್ದು, ವ್ಯಾಪಾರ ಮತ್ತು ವ್ಯವಹಾರ ದೃಷ್ಟಿಯಿಂದಲೂ ಇದು ಅತ್ಯಂತ ಪ್ರಯೋಜನಕಾರಿ ಮಾರ್ಗ ಎನ್ನುತ್ತಾರೆ ಸ್ಥಳೀಯರು.
ಸೇತುವೆ ಕುಸಿದು ಬಿದ್ದ ನಂತರ ಕಬಿನಿ, ನೀರಾವರಿ ಇಲಾಖೆ ಅಧಿಕಾರಿಗಳು ತಾತ್ಕಾಲಿಕ ಸೇತುವೆ ಮಾಡಿದ್ದಾರೆ. ಆದರೆ ಆ ಪರ್ಯಾಯ ಸೇತುವೆಯಲ್ಲಿ ಒಬ್ಬರೂ ಮಾತ್ರ ಹೋಗಬಹುದಾಗಿದೆ.ಅಕ್ಕಪಕ್ಕದ ಗ್ರಾಮಸ್ಥರು ಜಮೀನಿನಿಗೆ ಹೋಗಲು, ಜಾನುವಾರುಗಳನ್ನು ಕರೆದುಕೊಂಡು ಹೋಗಬೇಕಾದರೆ ಇಲ್ಲಿ ಹರಸಾಹಸ ಪಡಬೇಕಿದೆ. ಜಮೀನಿಗೆ ಹೋಗಲು ಚಾಮೇಗೌಡನಹುಂಡಿ ಮತ್ತು ಪುರದಕಟ್ಟೆ ಗ್ರಾಮವನ್ನು ಬಳಸಿಕೊಂಡು ಹೋಗವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದು, ಇನ್ನಾದರೂ ಜನರ ಹಿತದೃಷ್ಟಿಯಿಂದ ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳು ಇತ್ತ ಗಮಹರಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗದಿದ್ದರೆ ರಸ್ತೆ ಸಂಚಾರ ತಡೆ, ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸೇತುವೆ ಕುಸಿದು ವರ್ಷ ಕಳೆದರೂ ಮರು ನಿರ್ಮಾಣ ಮಾಡದಿರುವುದು ದುರದೃಷ್ಟಕರ. ಈ ರಸ್ತೆ ಮೂಲಕ ಪ್ರತಿ ದಿನ ನೂರಾರು ಸಾರ್ವಜನಿಕರು ಹಾಗೂ ಚಿಕ್ಕದೇವಮ್ಮನ ಬೆಟ್ಟಕ್ಕೆ ಸಾವಿರಾರು ಭಕ್ತರು ತೆರಳುತ್ತಿದ್ದರು. ಸೇತುವೆ ಕುಸಿದಿರುವುದರಿಂದ ಜನರು ಜೀವವನ್ನು ಪಣಕ್ಕಿಟ್ಟು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಹಲವು ಬಾರಿ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣವೇ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿ ಸಾರ್ವಜನಿಕರ ಸಂಕಷ್ಟವನ್ನು ನಿವಾರಿಸಬೇಕು.
ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ
ಸೇತುವೆ ಇಲ್ಲದ ಕಾರಣ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ವೃದ್ಧರು ಮತ್ತು ಮಹಿಳೆಯರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ಜನರ ಜೀವದೊಂದಿಗೆ ಚೆಲ್ಲಾಟವಾಡುವ ಬದಲು ಕೂಡಲೇ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು.
ಮಳೆಗಾಲದಲ್ಲಿ ಜನರು ಜೀವಭಯದಲ್ಲೇ ಸಂಚರಿಸುವಂತಾಗಿದೆ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸರ್ಕಾರ ಎಚ್ಚೆತ್ತು ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಕಬಿನಿ ಬಲದಂಡೆ ನಾಲೆಯ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಕೆಲಸ ಪೂರ್ಣಗೊಂಡ ನಂತರ ಕಾಮಗಾರಿಯನ್ನು ಆರಂಭಿಸಲಾಗುವುದು. ರೈತರು, ಸಾರ್ವಜನಿಕರು ಹಾಗೂ ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸಲು ತಾತ್ಕಾಲಿಕವಾಗಿ ಕಂಬಿನ ಸೇತುವೆ ನಿರ್ಮಾಣ ಮಾಡಲಾಗಿದೆ. ಜನರಿಗೆ ನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಆರಂಭಿಸಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲಾಗುವುದು.
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಕಬಿನಿ ಉಪವಿಭಾಗ ಸರಗೂರು