- ನ್ಯಾಯಾಲಯಕ್ಕೆ ಆಧಿಕಾರವಿದೆ ಎಂದ ಹೈಕೋರ್ಟ್
- ಆಂತರಿಕ ದಾಖಲೆ ಎಂದು ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಲಾಗದು ಸ್ಪಷ್ಟನೆ
ಬೆಂಗಳೂರು:
ಎನ್ಫೊರ್ಸ್ಮೆಂಟ್ ಕೇಸ್ ಇನ್ಫಮೇರ್ಷನ್ ರಿಪೋರ್ಟ್ (ಇಸಿಐಆರ್) ಎಂಬುದು ಜಾರಿ ನಿರ್ದೇಶನಾಲಯದ (ಇ.ಡಿ.) ಆಂತರಿಕ ಆಡಳಿತಾತ್ಮಕ ದಾಖಲೆಯಾಗಿದ್ದು, ಸಂವಿಧಾನದ 226ನೇ ವಿಧಿ ಅಡಿಯಲ್ಲಿ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯಿಂದ ಹೊರಗಿದೆ ಎಂಬ ಜಾರಿ ನಿರ್ದೇಶನಾಲಯದ ವಾದವನ್ನು ಹೈಕೋರ್ಟ್ ನಿರಾಕರಿಸಿದೆ.
ಮೂಲ ಅಪರಾಧವು (ಪ್ರೆಡಿಕೆಟ್ ಅಫೆನ್ಸ್) ರದ್ದಾಗಿದ್ದರೂ ಕೂಡ, ಇಸಿಐಆರ್ ದಾಖಲಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಿದ್ದ ಇ.ಡಿ. ಕ್ರಮವನ್ನು ಪ್ರಶ್ನಿಸಿ ಗೇಮ್ಸ್ಕ್ರಾಫ್ಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಆಡಳಿತಾತ್ಮಕ ದಾಖಲೆ ಎಂದು ಕರೆದುಕೊಂಡು ನಾಗರಿಕರ ತಪಾಸಣೆ, ಆಸ್ತಿ ಜಪ್ತಿ ಮತ್ತು ಬಂಧನದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅವಕಾಶ ನೀಡಿ, ನಂತರ ನ್ಯಾಯಾಂಗ ಪರಿಶೀಲನೆಯಿಂದ ಹೊರಗುಳಿಯಲು ಸಾಧ್ಯವಿಲ್ಲ. ಮೂಲ ಅಪರಾಧವೇ ಇಲ್ಲದಿರುವಾಗ ಅದರ ಆಧಾರದ ಮೇಲೆ ನಿಂತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಮುಂದುವರಿಯಲು ಸಾಧ್ಯವಿಲ್ಲ. ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸದಾಗ ವಿಚಾರಣೆ ನಡೆಸುವ ಸಂಪೂರ್ಣ ಅಧಿಕಾರ ಹೈಕೋರ್ಟ್ಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಕಂಪನಿ ಸಲ್ಲಿಸಿದ್ದ ಅರ್ಜಿಯ "ಮಾನ್ಯತೆ' ಬಗ್ಗೆ ಮಾತ್ರ ಸದ್ಯ ತೀರ್ಪು ನೀಡಿದ್ದು, ವಿಚಾರಣೆ ಮುಂದುವರಿಯಲಿದೆ.
ಏನಿದು ಪ್ರಕರಣ?:
3 ಕೋಟಿ ರೂ. ನಷ್ಟದ ಆರೋಪದಲ್ಲಿ ಬಳಕೆದಾರೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಗೇಮ್ಸ್ಕ್ರಾಫ್ಟ್ ಕಂಪನಿ ವಿರುದ್ಧ 2024ರ ಡಿಸೆಂಬರ್ನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಿ&ರಿಪೋರ್ಟ್ ಸಲ್ಲಿಸಿದ್ದರು. ನ್ಯಾಯಾಲಯ ಅದನ್ನು ಪರಿಗಣಿಸಿತ್ತು. ಆದರೆ, ಈ ಪ್ರಕ್ರಿಯೆ ಮುಗಿದ ಆರು ತಿಂಗಳ ನಂತರ ಅದೇ ಪ್ರಕರಣದ ಆಧಾರದಲ್ಲಿ ಇಸಿಐಆರ್ ದಾಖಲಿಸಿದ್ದ ಇ.ಡಿ. ದಾಳಿ ನಡೆಸಿ ಜಪ್ತಿ ಪ್ರಕ್ರಿಯೆ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ℹ️
ಯಾವುದೇ ಅಕ್ರಮ ಪರಿಶೀಲಿಸಬಹುದು
ಇಸಿಐಆರ್ ಎನ್ನುವುದು ಎಫ್ಐಆರ್ ನಂತೆ ಶಾಸನಬದ್ಧ ದಾಖಲೆಯಲ್ಲ, ಅದು ಆಂತರಿಕ ವ್ಯವಹಾರದ ದಾಖಲೆಯಾದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂಬ ಇ.ಡಿ. ವಾದವನ್ನು ಹೈಕೋರ್ಟ್ ನಿರಾಕರಿಸಿದೆ. ಒಂದು ದಾಖಲೆಯನ್ನು ಆಡಳಿತಾತ್ಮಕ ದಾಖಲೆ ಎಂದು ಕರೆಯುತ್ತಲೇ, ಅದರ ಮೂಲಕ ನಾಗರಿಕರ ಹಕ್ಕುಗಳಿಗೆ ಧಕ್ಕೆ ಉಂಟುಮಾಡಲಾಗದು. ಯಾವುದೇ ಅಕ್ರಮ ತನಿಖೆಯನ್ನು ಪರಿಶೀಲಿಸುವ ಅಧಿಕಾರ ಹೈಕೋರ್ಟ್ಗೆ ಇದೆ ಎಂದು ಸ್ಪಷ್ಟಪಡಿಸಿದೆ.