ಆನೇಕಲ್ ತಾಲೂಕಿನ ಅತ್ತಿಬೆಲೆಯ ಮಂಚನಹಳ್ಳಿ ರಸ್ತೆಯ ಶ್ರೀ ಶಾರದ ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಾರದ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ, ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಇದ್ದರು.
ಆನೇಕಲ್ : ಮೊಟ್ಟೆಯಲ್ಲಿ 11 ಬಗೆಯ ಮಿನರಲ್ಗಳಿವೆ, 13 ಬಗೆಯ ವಿಟಮಿನ್ಗಳಿವೆ. ಆದರೆ ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಇದು ಸತ್ಯಕ್ಕೆ ದೂರ. ಸುಳ್ಳು ಸುದ್ದಿ ಹರಡಿಸಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂದು ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಹೇಳಿದರು.
ಅತ್ತಿಬೆಲೆಯ ಮಂಚನಹಳ್ಳಿ ರಸ್ತೆಯ ಶ್ರೀ ಶಾರದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಧಾರವಾಹಿಗಳು ಹೆಚ್ಚಾಗುತ್ತಿದ್ದಂತೆ ಆಹಾರ ಸೇವಿಸುವ ಸಮಯವು ಬದಲಾಗುತ್ತಿದೆ. ಸಂಜೆ 6 ರಿಂದ 10ರವರೆಗೂ ಧಾರವಾಹಿಗಳನ್ನು ನೋಡಿಕೊಂಡು ಕೆಂ ಡೈರಿ ಸಮಯದಲ್ಲಿ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯ ದೊರೆಯುವುದಿಲ್ಲ. ಪ್ರತಿದಿನ 2-3 ಲೀಟರ್ ನೀರು ಕುಡಿಯಬೇಕು. ಆಹಾರದಲ್ಲಿ ಫೈಬರ್, ಮಿನರಲ್ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೇಖಕಿ ಡಾ.ವಿಜಯಲಕ್ಷಿ$್ಮ ಬಾಳೆಕುಂದ್ರಿ ಮಾತನಾಡಿ, ಜೀವನಶೈಲಿಯ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿತ್ಯ ವ್ಯಾಯಾಮ, ಯೋಗದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟಾಪಟ್ ರವಿ, ನಿಸರ್ಗ ದೃಷ್ಟಿಧಾಮದ ದೇವರಾಜ ನಾಯಕ್, ಲೇಖಕ ಮಹೇಶ್ ಊಗಿನಹಳ್ಳಿ ಇದ್ದರು.
2000 ಜನರ ತಪಾಸಣೆ : ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು ಎರಡು ಸಾವಿರ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 130 ಮಂದಿ ರಕ್ತದಾನ ಮಾಡಿದರು. ಶಿಬಿರದಲ್ಲಿ ನೇತ್ರ, ಮೂಳೆ, ಸ್ತ್ರೀರೋಗ, ಚರ್ಮ, ದಂತ ಸೇರಿ ವಿವಿಧ ವಿಭಾಗಗಳಲ್ಲಿ ತಪಾಸಣೆ ನಡೆಸಲಾಯಿತು. ಆಕ್ಸ್ಫರ್ಡ್ ಆಸ್ಪತ್ರೆ, ನಿಸರ್ಗ ದೃಷ್ಟಿ ಆಸ್ಪತ್ರೆ, ಜೆಕೆ ಹೃದಯ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರು ಪಾಲ್ಗೊಂಡಿದ್ದರು.
ಇತ್ತೀಚೆಗೆ ವಾಟ್ಸಪ್ ಮತ್ತು ಯುಟ್ಯೂಬ್ ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿವೆ. ನಗರೀಕರಣದ ಪ್ರಭಾವದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಉತ್ತಮ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಆರೋಗ್ಯ ಪ್ರಥಮ ಆದ್ಯತೆ ನೀಡಬೇಕು.