ಬೆಂಗಳೂರು : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಡಿಜಿಟಲ್ ಖಾತಾ ನೀಡಲು ಭೂ ಗ್ಯಾರಂಟಿ ಯೋಜನೆಯಡಿ ಸೆ.21ರಂದು ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ನಗರ ಪ್ರದೇಶದ ಆಸ್ತಿಗಳಿಗೆ ಡಿಜಿಟಲ್ ಖಾತಾ ವಿತರಿಸಿದ ಮಾದರಿಯಲ್ಲೇ ಗ್ರಾಪಂ ಸ್ವತ್ತುಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ನೀಡಲು ಕಾಯ್ದೆಗೆ ತಿದ್ದುಪಡಿ ತಂದು 2025ರ ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಯಿತು. ಆದರೆ ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದ ಉದ್ದೇಶ ಈಡೇರಲಿಲ್ಲ. ಇದೀಗ ಸ್‌ಟಾವೇರ್ ಸರಳಗೊಳಿಸಿ ಎಲ್ಲ ಆಸ್ತಿಗಳಿಗೆ ತಂತ್ರಾಂಶದಲ್ಲಿ ತೆರಿಗೆ ನಿರ್ಧರಣೆ ಪಟ್ಟಿ ನಮೂನೆ-11(ಎ) ಮತ್ತು 11(ಬಿ) ದಾಖಲೆಗಳನ್ನು ವಿತರಿಸಲು ದಿನಾಂಕ ನಿಗದಿ ಮಾಡಿದೆ.
ಸೆ.21ರಂದು ಗ್ರಾಮವಾರು, ವಾರ್ಡ್‌ವಾರು ಅರ್ಹ ಆಸ್ತಿಗಳ ಪಟ್ಟಿ ಮಾಡುವುದು, ಅಭಿಯಾನ ನಡೆಸಲು ಆಸ್ತಿಗಳ ಸಂಖ್ಯೆಗಳಿಗೆ ಅನುಸಾರವಾಗಿ ಸ್ಥಳ, ಸಮಯ ಮತ್ತು ದಿನಾಂಕದೊಂದಿಗೆ ವೇಳಾಪಟ್ಟಿ ಸಿದ್ಧಪಡಿಸಲು ಪಿಡಿಒಗಳಿಗೆ ಸೂಚಿಸಲಾಗಿದೆ. ಪ್ರತಿ ಗ್ರಾಮಗಳಲ್ಲೂ ಅಭಿಯಾನದ ಪ್ರಚಾರ ಮಾಡಬೇಕು. ಸಿಟಿಜನ್ ಲಾಗಿನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈಗಾಗಲೇ ಪಂಚತಂತ್ರ ತಂತ್ರಾಂಶದಲ್ಲಿ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಸೃಜಿಸಲಾಗಿರುವ ಕರಡು ನಮೂನೆಗಳನ್ನು ಆಯ್ಕೆ ಮಾಡಿ ಮಾಹಿತಿ ಹಾಗೂ ದಾಖಲೆಗಳನ್ನು ಇಂಡೀಕರಿಸಲು ಸಾರ್ವಜನಿಕರಿಗೆ ಸಹಕಾರ ನೀಡಬೇಕು.
ಯಾವ ಆಸ್ತಿಗಳಿಗೆ 11ಎ ಮತ್ತು 11ಬಿ ನೀಡಲಾಗುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ದಾಖಲೆಗಳನ್ನು ಕ್ರೋಡೀಕರಣ ಮಾಡಬೇಕು. ಸ್ವೀಕರಿಸಿದ ಅರ್ಜಿಗಳಿಗೆ 7 ದಿನಗಳ ಒಳಗೆ ಆಸ್ತಿ ಚೆಕ್ಕುಬಂದಿದಾರರು ಸಲ್ಲಿಸಿದ ಆಕ್ಷೇಪಗಳನ್ನು ನಿಯಮಾನುಸಾರ ಪೂರ್ಣ ದಾಖಲೆಗಳೊಂದಿಗೆ ಪರಿಶೀಲಿಸಿ ದಿಶಾಂಕ್ ತಂತ್ರಾಂಶದ ಮೂಲಕ ಆಸ್ತಿಯ ಛಾಯಾಚಿತ್ರ, ಜಿಪಿಎಸ್ ಆಸ್ತಿಯ ಅಳತೆ ಇತರ ವಿವರ ಪಡೆದು ಇ-ಖಾತಾ ನೀಡಬೇಕೆಂದು ಸೂಚನೆ ನೀಡಲಾಗಿದೆ.