- * ಪ್ರಶಸ್ತಿಗಳು ತಲಾ 10 ಸಾವಿರ ನಗದು ಒಳಗೊಂಡಿವೆ
ಬೆಂಗಳೂರು: ಈ ಹೊತ್ತಿಗೆ ಟ್ರಸ್ಟ್ ನೀಡುವ 2026ನೇ ಸಾಲಿನ ಈ ಹೊತ್ತಿಗೆ ಕಾವ್ಯ ಪ್ರಶಸ್ತಿಗೆ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರ ‘ಪೆನಲೊಪಿ’ ಅಪ್ರಕಟಿತ ಕವನ ಸಂಕಲನ, ಈ ಹೊತ್ತಿಗೆ ಕಥಾ ಪ್ರಶಸ್ತಿಗೆ ಕಥೆಗಾರ ಎಂ. ಮನೋಹರ ಪೈ ಅವರ ‘ಲಾಧಾಕ್ಲಿಸ್ಣ ಮತ್ತು ಇಂದಿಲಾ ಕ್ಯಾಂಟೀನು’ ಅಪ್ರಕಟಿತ ಕಥಾಸಂಕಲನ ಆಯ್ಕೆಯಾಗಿವೆ.
ಪ್ರಶಸ್ತಿಗಳು ತಲಾ 10 ಸಾವಿರ ನಗದು ಒಳಗೊಂಡಿವೆ. ಚಿತ್ರದುರ್ಗದ ತಾರಿಣಿ ಶುಭದಾಯಿನಿ ಅವರ ಹಲವು ಕವನ ಸಂಕಲನ, ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಕಾರ್ಕಳದ ಮನೋಹರ ಪೈ ಅವರು ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಅವರ ಕಥಾ ಸಂಕಲನ ಮತ್ತು ಕಾದಂಬರಿಗಳು ಪ್ರಕಟವಾಗಿವೆ.
ಪುರಸ್ಕೃತರ ಆಯ್ಕೆ ಮಾಡಲು ಕಾವ್ಯ ವಿಭಾಗದಲ್ಲಿ ಕವಿ ಆನಂದ ಝುಂಜರವಾಡ ಮತ್ತು ಕಥಾ ವಿಭಾಗದಲ್ಲಿ ಲೇಖಕಿ ಜಯಶ್ರೀ ದೇಶಪಾಂಡೆ ತೀರ್ಪುಗಾರರಾಗಿದ್ದರು. ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ.