ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ 
ರಾಜ್ಯ

ದಾಖಲೆಯಿಲ್ಲದ ಗ್ರಾಮ ಠಾಣಾ ಆಸ್ತಿಗೆ ಇ-ಸ್ವತ್ತು

ಬೆಂಗಳೂರು: ಗ್ರಾಮ ಠಾಣಾ ವ್ಯಾಪ್ತಿಯ ಮನೆಗಳಿಗೆ ಇ-ಸ್ವತ್ತು ನೀಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ಮಾಡಲು ಸೂಚನೆ ನೀಡಲಾಗಿದೆ. ಅಭಿಯಾನ ರೂಪದಲ್ಲಿ ಇ-ಖಾತಾ ನೀಡಲು ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬುಧವಾರ ಪಂಚಾಯತ್‌ರಾಜ್ ಇಲಾಖೆ ಕಚೇರಿಯಲ್ಲಿ ಉನ್ನತಾಧಿಕಾರಿಗಳೊಂದಿಗೆ ವಿಬಿಜಿ ರಾಮ್ ಜಿ ಮತ್ತು ಇ-ಸ್ವತ್ತು ಕುರಿತು ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 65 ಲಕ್ಷ ಆಸ್ತಿಗಳು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುತ್ತವೆ.
ಇವು ಅವರಿಗೆ ಪೂರ್ವಜರಿಂದ ಬಂದ ಬಳುವಳಿಯಾಗಿದ್ದು, ಕೆಲವರ ಬಳಿ ಸ್ವತ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲ. ಹೀಗಾಗಿ ಒಂದು ಬಾರಿ ಕ್ರಮವಾಗಿ ನಿಯಮಾವಳಿ ಸರಳೀಕರಣ ಮಾಡಿ, ಸಾರ್ವಜನಿಕರ ಆಕ್ಷೇಪಣೆ ಕರೆದು 100 ದಿನಗಳ ಒಳಗಾಗಿ ಗ್ರಾಮಠಾಣಾ ಆಸ್ತಿಗಳಿಗೆ ಅಭಿಯಾನ ರೀತಿಯಲ್ಲಿ ಇ-ಖಾತಾ ವಿತರಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಗ್ರಾಮೀಣ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಮತ್ತು ಸರ್ಕಾರದ ಆಸ್ತಿ (ಖರಾಬು, ಗೋಮಾಳ ಇತ್ಯಾದಿ) ಗಳನ್ನು ಸಂರಕ್ಷಿಸಿಕೊಂಡು ಸ್ವಾಧೀನದಲ್ಲಿ ಇರುವವರಿಗೆ ಖಾತಾ ನೀಡಲು ನಿರ್ಧಾರ ಮಾಡಲಾಗಿದೆ. ನಮೂನೆ 11ಬಿಯಲ್ಲಿ ಆಸ್ತಿಗಳಿಗೆ ಅರ್ಜಿ ಸಲ್ಲಿಸಲು, ಸೆಪ್ಟೆಂಬರ್‌ವರೆಗೆ ಕಾಲಾವಕಾಶ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರಾಮೀಣ ಜನರು ಸದುಪಯೋಗ ಪಡೆಯಬೇಕು. ಈವರೆಗೆ 10.16 ಲಕ್ಷ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿದೆ. 90 ಲಕ್ಷ ಆಸ್ತಿಗಳಿಗೆ ಎ ಮತ್ತು ಬಿ ಖಾತಾ ನೀಡಬೇಕಾಗಿದೆ ಎಂದು ವಿವರಿಸಿದರು.