- 371(ಜೆ) ಸಂಪುಟ ಉಪ ಸಮಿತಿ ಅಧ್ಯಕ್ಷರ ಭಾಗದವರಿಗೆ ಹೊಡೆತ
- ಡಿಸಿಆರ್ಇಯಲ್ಲಿ ಹುದ್ದೆ ಸೃಜಿಸಿ ರಾಮನ ಲೆಕ್ಕ ತೋರಿಸಿದ ಇಲಾಖೆ
ಕಲಬುರಗಿ: ಮೇಲ್ದರ್ಜೆಗೇರಿಸಿರುವ ಡಿಸಿಆರ್ಇ ಘಟಕದಲ್ಲಿ ಸೃಜನೆಯಾಗಿರುವ ಡಿವೈಎಸ್ಪಿ ಹುದ್ದೆಗಳಿಗೆ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಬಡ್ತಿ ನೀಡಲು ಗೃಹ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ ಜ್ಯೇಷ್ಠತಾ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ(ಹೈಕ) ಭಾಗದವರಿಗೆ ಮತ್ತೊಮ್ಮೆ ಅನ್ಯಾಯವಾಗಿದೆ. ಸಂವಿಧಾನ 371(ಜೆ) ವಿಧಿ ನಿಯಮ ಗಾಳಿಗೆ ತೂರಿ ಮರ್ಮಾಘಾತ ನೀಡಲು ವ್ಯವಸ್ಥಿತ ಹುನ್ನಾರ ನಡೆದಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಘಟಕದಲ್ಲಿ ಹೊಸದಾಗಿ 22 ಡಿವೈಎಸ್ಪಿ ಹುದ್ದೆ ಸೃಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮುಂಚೆ ರಾಜ್ಯದಲ್ಲಿ 31 ಜಿಲ್ಲೆಗಳಿದ್ದು, ವಿಭಾಗಕ್ಕೆ ಒಂದು, ಕೆಲವೆಡೆ ವಲಯಕ್ಕೊಂದು ಡಿವೈಎಸ್ಪಿ ಹುದ್ದೆಗಳಿದ್ದವು. ಕೆಲದಿನ ಹಿಂದೆ ಡಿಸಿಆರ್ಇಗೆ ಬಲ ತುಂಬಲು ಮತ್ತು ದೌರ್ಜನ್ಯ ಪ್ರಕರಣಗಳ ತನಿಖೆ ಚುರುಕುಗೊಳಿಸಲು ಗೃಹ ಇಲಾಖೆ ಜಿಲ್ಲೆಗೊಂದು ಹುದ್ದೆ ಮಂಜೂರು ಮಾಡಿದೆ.
ಇಡೀ ಕಲ್ಯಾಣ ಕರ್ನಾಟಕಕ್ಕೆ ಒಂದು ಡಿವೈಎಸ್ಪಿ ಹುದ್ದೆ ಇತ್ತು. ಇದೀಗ ಹೊಸದಾಗಿ ಆರು ಹುದ್ದೆಗಳು ಸೃಜನೆಯಾಗಿವೆ. ರಾಜ್ಯದ ಉಳಿದೆಡೆ ಹೊಸದು ಸೇರಿ ಜಿಲ್ಲೆಗೊಂದರಂತೆ 16 ಹುದ್ದೆಗಳಿವೆ. ಸಂವಿಧಾನದ 371(ಜೆ) ವಿಧಿಯನ್ವಯ ಶೇ.80 ಮೀಸಲಾತಿಯಂತೆ ಕಕದ 6 ಹುದ್ದೆಗಳಲ್ಲಿ 5 ಈ ಭಾಗದವರಿಗೆ ಹಾಗೂ ಬೆಂಗಳೂರು ಭಾಗದಲ್ಲಿ ಅಸಿತ್ವಕ್ಕೆ ಬರಲಿರುವ 16 ಹುದ್ದೆಗಳಲ್ಲಿ 2 ಕಕದ ಇನ್ಸ್ಪೆಕ್ಟರ್ಗಳಿಗೆ ಕೊಡಬೇಕು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಯ ಪ್ರಭಾವಕ್ಕೆ ಒಳಗಾಗಿರುವ ಅಧಿಕಾರಿಗಳು ಸೇರಿ ಈ ಹುದ್ದೆಗಳನ್ನು ರಾಜ್ಯಕ್ಕೆ ಅನ್ವಯಿಸುವಂತೆ ಇಲ್ಲವೇ ಕೇವಲ ಕೇಂದ್ರ ಕಚೇರಿ ಬೆಂಗಳೂರಿಗೆ ಸೀಮಿತಗೊಳಿಸಿ ಬಡ್ತಿ ನೀಡಲು ಆದೇಶಿಸಲಾಗಿದೆ ಎಂದು ಉನ್ನತ ಮೂಲಗಳು ವಿಜಯವಾಣಿಗೆ ತಿಳಿಸಿವೆ.
ಡಿಸಿಆರ್ಇ ಕೇಂದ್ರ ಸ್ಥಾನ ಎಂದು ಹುದ್ದೆಗಳನ್ನು ತೋರಿಸಿ ನಂತರ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸೃಜನೆ ಮಾಡಿರುವ ಹುದ್ದೆಗಳಿಗೆ ನಿಯೋಜನೆ ಮಾಡುವುದು ಕೆಲವರ ವ್ಯವಸ್ಥಿತ ಹುನ್ನಾರವಾಗಿದೆ. ಅಂತಲೇ ಡಿವೈಎಸ್ಪಿ ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಿರುವ ಕಕದ ಹಿರಿತನ ಹೊಂದಿದ ಇನ್ಸ್ಪೆಕ್ಟರ್ಗಳ ಹೆಸರು ಈಗ ಡಿಸಿಆರ್ಇ ವಿಭಾಗದ ಜ್ಯೇಷ್ಠತಾ ಪಟ್ಟಿಯಲ್ಲಿ ಬಂದರೂ ಪಾಳಿ ಬರುವುದಿಲ್ಲ. ಸಹಜವೇ ಬಡ್ತಿಯಿಂದ ವಂಚಿತರಾಗುವಂತಾಗುವಂತಾಗಲಿದೆ.
ಸೇವಾ ಹಿರಿತನ ಪಟ್ಟಿಯನ್ನು ಕಲ್ಯಾಣ ಕರ್ನಾಟಕದವರನ್ನು ವ್ಯವಸ್ಥಿತವಾಗಿ ಹೊರಗುಳಿಯುವಂತೆ ಸಿದ್ಧಪಡಿಸುವುದರಿಂದ ಅರ್ಹತೆ ಪಡೆಯುವುದಿಲ್ಲ. ಸಲೀಸಾಗಿ ನಾನ್ ಎಚ್ಕೆ(ಹೈದರಾಬಾದ್ ಕರ್ನಾಟಕ)ದವರು ಆ ಹುದ್ದೆಗಳಿಗೆ ಬಡ್ತಿ ಹೊಂದುವ ಮೂಲಕ ನಮ್ಮ ಭಾಗಕ್ಕೆ ಮತ್ತೊಂದು ಹೊಡೆತ ನೀಡಿದಂತಾಗಲಿದೆ.
ಹೊಸದಾಗಿ ಸೃಜನೆಯಾಗಿರುವ ಡಿಸಿಆರ್ಇ ಡಿವೈಎಸ್ಪಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟದ ಆರು ಹುದ್ದೆ ನಿಯಮದಂತೆ ಈ ಭಾಗದ್ದು ಎಂದು ಪರಿಗಣಿಸುವ ಮೂಲಕ ಅರ್ಹರಿಗೆ ಬಡ್ತಿ ಸಿಗುವಂತೆ ಆಗಬೇಕು. ಅಲ್ಲದೆ ಬೆಂಗಳೂರಿನಲ್ಲಿ ನೀಡುವ 371(ಜೆ) ಮೀಸಲಾತಿಯಂತೆ 2 ಮತ್ತು ಕಕದ 5 ಸೇರಿದರೆ ಈ ಭಾಗದ ಅರ್ಹ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿಗಳಾಗುವ ಭಾಗ್ಯ ಲಭಿಸಲಿದೆ. ಇದರೊಂದಿಗೆ ಲೋಕಾಯುಕ್ತದಲ್ಲೂ ನಿರಂತರ ಹೊಡೆತ ಬೀಳುತ್ತಿದ್ದು, ತುರ್ತಾಗಿ ಸರಿಪಡಿಸುವ ಕೆಲಸ ಆಗಬೇಕಾಗಿದೆ.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಡಿಸಿಆರ್ಇ ಹುದ್ದೆಗಳನ್ನು ಸೃಜಿಸಿದಾಗ ಸಂವಿಧಾನಬದ್ಧವಾಗಿ ಈ ಭಾಗದವರಿಗೆ ಅದರ ಲಾಭ ಸಿಗಬೇಕು. ಸಂವಿಧಾನ 371(ಜೆ) ಅಡಿ ಮೀಸಲಾತಿ ನೀಡಲಾಗಿದ್ದು, ಯಾರನ್ನೂ ವಂಚಿತರನ್ನಾಗಿಸಲು ಬರಲ್ಲ. ಜ್ಯೇಷ್ಠತಾ ಪಟ್ಟಿ ತರಿಸಿಕೊಂಡು ಪರಿಶೀಲಿಸುವ ಮೂಲಕ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು.