ದುಬಾರೆ ಆನೆ ಕಾದಾಟದಲ್ಲಿ ಮೃತಪಟ್ಟ ಮಹಿಳೆ
ಕುಶಾಲನಗರ: ನಿನ್ನೆ (ಮಾ.18) ದುಬಾರೆ ಆನೆ ಶಿಬಿರದಲ್ಲಿ ಚೆನ್ನೈ ಮೂಲದ ಮಹಿಳಾ ಪ್ರವಾಸಿಯೊಬ್ಬರು ಆನೆಗಳ ಕಾದಾಟಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದರು. ಇದೇ ಸಂದರ್ಭದಲ್ಲಿ, ಕಂಜನ್ ಆನೆಯ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದೆ.
ಎಲಿಫೆಂಟ್ ಬಾತಿಂಗ್ ವೀಕ್ಷಿಸಲು ಹೋದಾಗ ಸಾಕಾನೆ ಮೈಮೇಲೆ ಬಿದ್ದು ಚೆನ್ನೈ ಮೂಲದ ಮಹಿಳೆ ಜಿನ್ಶಾ ದುರಂತವಾಗಿ ಸಾವನ್ನಪ್ಪಿದರು. ಈ ದುರಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಆನೆಗಳ ಕಾಳಗಕ್ಕೆ ಪ್ರವಾಸಿಯೊಬ್ಬರು ಉಸಿರು ಚೆಲ್ಲುವಂತಾಯಿತು ಎಂದು ಅನೇಕರು ಕಳವಳ ವ್ಯಕ್ತಪಡಿಸಿದರು. ಮತ್ತೊಂದೆಡೆ, ಕಂಜನ್ ಆನೆಯ ಹುಚ್ಚು ವರ್ತನೆಗೆ ಗಾಯಗೊಂಡ ಮಾರ್ತಾಂಡ ಎಂಬ ಸಾಕಾನೆ, ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದೆ.
ದುರ್ಘಟನೆ ಸಂಭವಿಸಿದ್ದು ಹೇಗೆ?
ದುಬಾರೆ ಆನೆ ಶಿಬಿರದಲ್ಲಿ ಆನೆಗಳನ್ನು ಬಹಳ ಹತ್ತಿರದಿಂದ ನೋಡಲು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಈ ಸಂದರ್ಭದಲ್ಲಿ, ಎಲಿಫೆಂಟ್ ಬಾತಿಂಗ್ ನೋಡಲು ಮುಂದಾದ ಚೆನ್ನೈ ಮೂಲದ ದಂಪತಿ ಮೇಲೆ ಕಂಜನ್ ಜೊತೆಗೆ ಕಾದಾಟಕ್ಕೆ ಬಿದ್ದ ಮಾರ್ತಾಂಡ ಆನೆ ದಿಢೀರ್ ಕೆಳಗೆ ಬಿದ್ದಿತು. ಆನೆ ಮಧ್ಯೆ ಸಿಲುಕಿದ ಮಹಿಳೆ ಉಸಿರು ಚೆಲ್ಲಿದರೆ, ಪತಿ ಗಂಭೀರ ಗಾಯಗಳಿಂದ ಬದುಕುಳಿದಿದ್ದಾರೆ.
ಕಣ್ಣುಗಳು ದಾನ
ತಾನು ಮತ್ತು ಮಗುವಿನ ಪ್ರಾಣವನ್ನು ಉಳಿಸಿಕೊಂಡ ಮೃತ ಮಹಿಳೆಯ ಪತಿ, ಸತ್ತ ಮೇಲೂ ನನ್ನ ಹೆಂಡತಿ ಈ ಪ್ರಪಂಚವನ್ನು ಇನ್ನೊಬ್ಬರ ಮೂಲಕ ನೋಡುವಂತಾಗಲಿ ಎಂದು ಆಕೆಯ ಕಣ್ಣುಗಳನ್ನು ದಾನ ಮಾಡಿದ್ದಾರೆ. ಜಿನ್ಶಾ ಅವರ ಸಾವಿನ ದುಃಖದ ನಡುವೆಯೂ ಸಾರ್ಥಕತೆ ತೋರುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ ಮತ್ತು ಹಲವರಿಗೆ ಸ್ಪೂರ್ತಿಯಾಗಿದ್ದಾರೆ.