drugs-worth ₹ 60.86 crore-seized
- ಐವರು ವಿದೇಶಿಗರು ಸೇರಿ 8 ಮಂದಿ ಬಂಧನ
- 6 ತಿಂಗಳಲ್ಲಿ 221.27 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ
ಬೆಂಗಳೂರು: ಮಾದಕವಸ್ತು ಬೇಡ ಅಂತ ಹೇಳೋಣ ಮತ್ತು ರೈಸ್ (ನಿರಾಕರಿಸಿ, ಅರಿವು, ಸಹಾಯ, ಸಬಲೀಕರಣ) ಅಭಿಯಾನದ ನಂತರ ನಗರದಲ್ಲಿ ಕಳೆದ ಒಂದು ವಾರದಲ್ಲಿ ಸಿಸಿಬಿ ಪೊಲೀಸರನ್ನು ಒಳಗೊಂಡಂತೆ ಸ್ಥಳೀಯ ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 60.86 ಕೋಟಿ ರೂ.ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್‌ನ್ನು ಪತ್ತೆ ಮಾಡಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹದ ದಳ, ಹೆಬ್ಬಾಳ ಹಾಗೂ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ಮಾರಾಟ ಹಾಗೂ ಸರಬರಾಜು ಜಾಲವನ್ನು ಭೇದಿಸಿದ್ದಾರೆ. 5 ವಿದೇಶಿ ಪೆಡ್ಲರ್ಸ್, ಹೊರ ರಾಜ್ಯದ ಓರ್ವ, ಸ್ಥಳೀಯ ಇಬ್ಬರು ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 29 ಕೆ.ಜಿ ಎಂಡಿಎಂಎ, 20 ಗ್ರಾಂ ಕೋಕೇನ್ ಹಾಗೂ 1,000 ಎಕ್ಸ್‌ಟೆಸಿ ಪಿಲ್ಸ್ ಜಪ್ತಿ ಮಾಡಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 3 ವಿದೇಶೀಯರನ್ನು ಬಂಧಿಸಿ 34 ಕೋಟಿ ರೂ. ಮೌಲ್ಯದ 17 ಕೆಜಿ 400 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆಗಾಗಿ 5 ವಿಶೇಷ ತಂಡಗಳನ್ನು ರಚಿಸಿ, ಭಾತ್ಮೀದಾರರು ಮತ್ತು ತಾಂತ್ರಿಕ ಮಾಹಿತಿ ಆಧಾರದ ಮೇಲೆ ಚಂಡಿಗಡ್, ನವದೆಹಲಿ ಶೋಧ ಕಾರ್ಯ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 30 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ:
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದಿಂದ ನಡೆಸಿದ ಕಾರ್ಯಾಚರಣೆ ವೇಳೆ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು 14.30 ಕೋಟಿ ರೂ.ಮೌಲ್ಯದ 6 ಕೆಜಿ 718 ಗ್ರಾಂ ಎಂಡಿಎಂಎ, 20 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ. ನಾಲ್ವರು ವ್ಯಕ್ತಿಗಳು ದೆಹಲಿ ಮೂಲದ ವ್ಯಕ್ತಿಯಿಂದ ನಿಷೇಧಿತ ಮಾದಕ ವಸ್ತುವನ್ನು ಖರೀದಿ ಮಾಡಿಕೊಂಡು ಬಂದು, ಸ್ಥಳಿಯ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ತನಿಖೆಯಿಂದ ತಿಳಿದಿದೆ.
ಗಿರಿನಗರ ಪೊಲೀಸ್ ಠಾಣೆ:
ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿಯ ಪ್ರಜೆಯನ್ನು ವಶಕ್ಕೆ ಪಡೆದು ಆತನಲ್ಲಿದ್ದ 5 ಕೆ.ಜಿ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಅಂದಾಜು 10 ಕೋಟಿ ರೂ.ಮೌಲ್ಯದ ಎಂಡಿಎಂಎಯನ್ನು ನವದೆಹಲಿಯಲ್ಲಿ ವಾಸವಾಗಿರುವ ಹೊರ ದೇಶದ ಪ್ರಜೆಯು ಬೆಂಗಳೂರು ನಗರದ ಸ್ಥಳೀಯ ಆರೋಪಿತರ ಮುಖಾಂತರ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
6 ತಿಂಗಳಲ್ಲಿ 221.27 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ
ಜನೆವರಿಯಿಂದ ಇಲ್ಲಿಯವರೆಗೆ ನಗರ ಪೊಲೀಸರಿಂದ ಡ್ರಗ್ಸ್ ದಂಧೆ ವಿರುದ್ಧ 2,936 ಪ್ರಕರಣ ದಾಖಲಿಸಿಕೊಂಡಿದ್ದಾರೆ. 3,840 ಮಂದಿ ಹೊರ ರಾಜ್ಯದವರು ಮತ್ತು 37 ವಿದೇಶಿಯರನ್ನು ಬಂಧಿಸಿದ್ದಾರೆ. ಎಲ್ಲ ಆರೋಪಿತರಿಂದ ₹ 221.27 ಕೋಟಿ ಮೌಲ್ಯದ 1415.274 ಕೆಜಿ ವಿವಿಧ ಮಾದರಿಯ ನಿಷೇಧಿತ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ.
ದೇಶ-ವಿದೇಶಗಳಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ಡ್ರಗ್ಸ್ ದಂಧೆ ಕೋರರ ವಿರುದ್ಧ ವಿಶೇಷ ಕಾಯಾಚರಣೆ ನಡೆಸಿ ನೂರಾರು ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆಯ ಮಾಡಲಾಗಿದೆ. ಅಕ್ರಮ ಚಟುವಟಿಕೆಯಲ್ಲಿ ತೋಡಗಿರುವವ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.
— -ಸೀಮಾಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಆಯುಕ್ತರು.