ಹೊಸ ವರ್ಷಕ್ಕೆ ರಾಜ್ಯದಲ್ಲಿ ಹೆಚ್ಚಲಿದೆ ಡ್ರಗ್ಸ್ ಅಮಲು 
ರಾಜ್ಯ

ಹೊಸ ವರ್ಷಕ್ಕೆ ರಾಜ್ಯದಲ್ಲಿ ಹೆಚ್ಚಲಿದೆ ಡ್ರಗ್ಸ್ ಅಮಲು! ಪೊಲೀಸರ ಕಣ್ತಪ್ಪಿಸುತ್ತಿರುವ ಪೆಡ್ಲರ್​ಗಳು

ಪ್ರಮುಖ ಮುಖ್ಯಾಂಶಗಳು

  • 500 ಕೋಟಿ ರೂ. ಮಾದಕ ವಸ್ತು ಮಾರಾಟ ಅಂದಾಜು
  • ಪೊಲೀಸರ ಕಣ್ತಪ್ಪಿಸುತ್ತಿರುವ ಪೆಡ್ಲರ್​ಗಳು

| ರವಿ ನಾಯಕ್, ಬೆಂಗಳೂರು

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಪತ್ತೆಹಚ್ಚಿದ ಬಳಿಕ ಮಾದಕ ಪದಾರ್ಥಗಳ ಚರ್ಚೆ ಜೋರಾಗಿದೆ. ಈ ಬೆನ್ನಲ್ಲೇ ಉದ್ಯಾನ ನಗರಿಯಲ್ಲಿ ಹೊಸ ವರ್ಷದ ದಿನ ಬರೋಬ್ಬರಿ 500 ಕೋಟಿ ರೂ.ಗೂ ಅಧಿಕ ಡ್ರಗ್ಸ್ ವಹಿವಾಟು ನಡೆಯುವ ಸಾಧ್ಯತೆ ಕುರಿತು ಪೊಲೀಸರು ಅಂದಾಜು ಮಾಡಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ದಾಖಲೆ ಮಟ್ಟದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಹೊಸ ವರ್ಷದ ಮೋಜು-ಮಸ್ತಿಗೆ 500 ಕೋಟಿ ರೂ.ಗೂ ಹೆಚ್ಚು ಮಾದಕ ವಸ್ತು ಮಾರಾಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಿದೇಶಿ ಡ್ರಗ್ಸ್ ಕಳ್ಳಮಾರ್ಗಗಳ ಮೂಲಕ ನಗರಕ್ಕೆ ಬಂದಿದೆ. ಏರ್​ಪೋರ್ಟ್​ಗಳು, ಮುಂಬೈ, ಕೋಲ್ಕತ ಬಂದರು ಮೂಲಕ ಮತ್ತು ದೆಹಲಿ, ಕೇರಳ, ತಮಿಳುನಾಡಿನಿಂದ ಎಂಡಿಎಂಎ, ಕೊಕೇನ್, ಹೈಡ್ರೋಗಾಂಜಾ ಕ್ವಿಂಟಾಲ್ ಲೆಕ್ಕದಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಡ್ರಗ್ಸ್ ದಂಧೆಕೋರರಿಗೆ ತಲುಪಿದೆ.

ಇದಲ್ಲದೆ ಪೆಡ್ಲರ್​ಗಳು ನೈಜೀರಿಯಾ, ಥಾಯ್ಲೆಂಟ್, ದಕ್ಷಿಣ ಕೊರಿಯಾದಿಂದ ಕೊರಿಯರ್ ಮೂಲಕ ಡ್ರಗ್ಸ್ ಖರೀದಿ ಮಾಡಿ ದಾಸ್ತಾನು ಮಾಡಿಕೊಂಡಿರುವುದನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಪತ್ತೆ ಮಾಡಿದೆ. ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧೆಡೆ ಅಕ್ರಮ ಮಾದಕ ವಸ್ತು ಪೂರೈಕೆ ಹಾಗೂ ಮಾರಾಟಕ್ಕೆ ಯತ್ನಿಸಿದ್ದ 5,930 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕಿಂತ ದ್ವಿಗುಣ: ರಾಜ್ಯಾದ್ಯಂತ ಈವರೆಗೆ 204 ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಬೆಂಗಳೂರಿನಲ್ಲೇ 170 ಕೋಟಿ ರೂ.ಮೌಲ್ಯದ ವಿದೇಶಿ ಡ್ರಗ್ಸ್ ಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪೈಕಿ 70,73,06,755 ರೂ. ಹೈಡ್ರೋಗಾಂಜಾ ಸೇರಿ 1,0084 ಕೆ.ಜಿ ವಿವಿಧ ಮಾದರಿ ಮಾದಕ ವಸ್ತುಗಳು ಪತ್ತೆಯಾಗಿವೆ. ಕಳೆದ 2024ರಲ್ಲಿ 16,27,36,100 ಕೋಟಿ ರೂ.ಮೌಲ್ಯದ ಡ್ರಗ್ಸನ್ನು ಜಪ್ತಿ ಮಾಡಲಾಗಿತ್ತು. ಆ ಪೈಕಿ 7,016 ಕೆ.ಜಿ.ಡ್ರಗ್ಸ್ ಪತ್ತೆಯಾಗಿದೆ. ಈ ಬಾರಿ ಪೊಲೀಸ್ ಇಲಾಖೆ ಅಂಕಿ ಅಂಶಗಳು ದ್ವಿಗುಣವಾಗಿವೆ.

485 ಅಕ್ರಮ ವಿದೇಶಿಗರು

ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿರುವುದು 170 ಕೋಟಿ ರೂಪಾಯಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ 485 ಮಂದಿ ಅಕ್ರಮ ವಿದೇಶಿಗರು ವಾಸವಾಗಿದ್ದಾರೆ. ಆ ಪೈಕಿ ಬೆಂಗಳೂರಿನಲ್ಲಿ 344 ಮಂದಿ, ಬೆಂಗಳೂರು ಗ್ರಾಮಾಂತರದಲ್ಲಿ 49 ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. 308 ಮಂದಿಯನ್ನು ಗಡಿಪಾರು ಮಾಡಲಾಗಿದೆ. 177 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಕ್ರಮವಾಗಿ ನೆಲೆಸಿರುವವರ ಪೈಕಿ ಶೇ. 80 ಮಂದಿ ಹಣದ ಆಸೆಗೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದವರಾಗಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಶೋಧ

ಮಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ 445.88 ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ 3 ಫ್ಯಾಕ್ಟರಿಗಳಲ್ಲಿ 55.88 ಕೋಟಿ, ಮೈಸೂರಿನ ಒಂದು ಫ್ಯಾಕ್ಟರಿ ಮೇಲೆ ಜುಲೈ ತಿಂಗಳಲ್ಲಿ ನಡೆದ ದಾಳಿ ವೇಳೆ 390 ಕೋಟಿ ಮಾದಕ ವಸ್ತುಗಳು ಪತ್ತೆಯಾಗಿವೆ. ಪೆಡ್ಲರ್​ಗಳು ಬೆಂಗಳೂರು ನಗರವನ್ನು ಕೇಂದ್ರವನ್ನಾಗಿಸಿಕೊಂಡು ರಾಜ್ಯ ಸೇರಿ ಹೊರ ರಾಜ್ಯಗಳಿಗೆ ಇಲ್ಲಿಂದಲೇ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೂಲವನ್ನು ಸಿಸಿಬಿ ಪತ್ತೆ ಮಾಡಿದೆ.

ಸ್ಥಳೀಯರು ಶಾಮೀಲು

ವಿದೇಶದಿಂದ ಬೆಂಗಳೂರಿಗೆ ಆಮದು ಮಾಡಿಕೊಂಡಿರುವ ಡ್ರಗ್ಸ್ ಮಾರಾಟ ದಂಧೆಯಲ್ಲಿ ಸ್ಥಳೀಯ ದಂಧೆಕೋರರು ಶಾಮೀಲಾಗಿದ್ದಾರೆ. ಇದರಿಂದ ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಪೂರೈಕೆ ಚಟುವಟಿಕೆ ಸಲೀಸಾಗಿ ನಡೆಯುತ್ತಿದೆ. ವಿದೇಶಿಗರ ಬಾಡಿಗೆ ಮನೆ, ರೂಮ್ ಕೊಡಿಸುವುದು, ಕೊರಿಯರ್ ಸ್ಥಳೀಯರ ಹೆಸರಿನ ವಿಳಾಸದಲ್ಲಿ ಬರುತ್ತಿರುವುದರಿಂದ ಅಕ್ರಮ ದಂಧೆಗೆ ಕಡಿವಾಣ ಇಲ್ಲದಂತಾಗಿದೆ.