ಶಿಡ್ಲಘಟ್ಟ ತಾಲೂಕು ವೀರಾಪುರದ ರೈತ ಮಹಿಳೆ ಅಶ್ವತ್ಥಮ್ಮ ಜಮೀನನ್ನು ವೀಕ್ಷಿಸಲಾಯಿತು. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಹಿತ್ತಲಹಳ್ಳಿ ರಮೇಶ್​, ತಾದೂರು ಮಂಜುನಾಥ್​, ವೇಣು, ಬಿ.ನಾರಾಯಣಸ್ವಾಮಿ, ಗೋಪಾಲ್​, ವೀರಾಪುರ ಮುನಿನಂಜಪ್ಪ, ಬಸವರಾಜು, ಮಂಜುನಾಥ್​, ರೈತ ಮಹಿಳೆ ಅಶ್ವತ್ಥಮ್ಮ ಇದ್ದರು. 
ರಾಜ್ಯ

ಬಿತ್ತನೆ ಆಧಾರದ ಮೇಲೆ ಬರ ಘೋಷಣೆ ಮಾಡಲಿ

ಚಿಕ್ಕಬಳ್ಳಾಪುರ ಡೆಸ್ಕ್

ಶಿಡ್ಲಟ್ಟ:

ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಕೂಡಲೆ ಬರ ಪರಿಹಾರ ವಿತರಿಸಬೇಕು. ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಆಗ್ರಹಿಸಿದರು.

ತಾಲೂಕಿನ ವೀರಾಪುರ ಇನ್ನಿತರ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬಿತ್ತನೆ, ಬರದ ಸ್ಥಿತಿ ಕುರಿತು ರೈತರೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ರಾಜ್ಯದ ಇನ್ನುಳಿದ ಎಲ್ಲ ತಾಲೂಕು ಬರಪೀಡಿತ ಎಂದು ಘೋಷಿಸಬೇಕು ಇದು ಕಣ್ಣೊರೆಸುವ ತಂತ್ರ ಆಗಬಾರದು. ಈ ಮೊದಲು ಶೇ.25 ಮಾತ್ರ ಬಿತ್ತನೆಯಾದರೆ ಬರ ಎಂದು ಘೋಷಿಸಲಾಗುತ್ತಿತ್ತು.
ಆದರೆ ಇದೀಗ ಆ ನಿಯಮ ಬದಲಿಸಿ ಮಳೆ ಆಧಾರದಲ್ಲಿ ಬರ ನಿರ್ಧರಿಸಲಾಗುತ್ತಿದ್ದು ಇದು ಸರಿಯಾದ ಕ್ರಮವಲ್ಲ. ಸಾಕಷ್ಟು ಮಳೆ ಬಿದ್ದರೂ ಸಕಾಲಕ್ಕೆ ಬೀಳದಿದ್ದಾಗ ಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ. ಈ ವರ್ಷವೂ ಅಂತದ್ದೇ ಪರಿಸ್ಥಿತಿ ಹಲವು ಕಡೆ ಇದೆ, ಹಾಗಾಗಿ ಮಳೆ ಆಧಾರದಡಿ ಬರ ಘೋಷಣೆ ಮಾಡದೆ ಬಿತ್ತನೆ ಆಧಾರದಲ್ಲಿ ಬರ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ನಮ್ಮಲ್ಲಿ ಇದೀಗ ಕಷ್ಟದ ಕಾಲವಿದೆ ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರದಲ್ಲಿ ಕಾನೂನನ್ನು ಬಿಟ್ಟು ಪರಸ್ಪರ ಪರಿಸ್ಥಿತಿ ಅವಲೋಕನ ಮಾಡಿ ಅಗತ್ಯ ನೀರು ಪಡೆಯಬೇಕು.
ಬಹುತೇಕ ಕೆರೆ&ಕುಂಟೆಗಳಲ್ಲಿ ನೀರು ಬತ್ತಿದೆ. ಡ್ಯಾಂಗಳಲ್ಲೂ ಸಾಕಷ್ಟು ನೀರಿಲ್ಲ. ಆದರೆ ತಮಿಳುನಾಡಿನ ಅನೇಕ ಡ್ಯಾಂಗಳಲ್ಲಿ ಸಾಕಷ್ಟು ನೀರು ಇದೆ. ಹಾಗಾಗಿ ಎರಡೂ ರಾಜ್ಯಗಳ ಮುಖ್ಯಸ್ಥರು, ಕಾವೇರಿ ಪ್ರಾಧಿಕಾರದ ಮುಖ್ಯಸ್ಥರು ಎರಡೂ ರಾಜ್ಯಗಳಲ್ಲಿನ ನೀರಿನ ಸ್ಥಿತಿಗತಿ ಅಧ್ಯಯನ ಮಾಡಿ ನೀರು ಬಿಡಬೇಕು ಎಂದರು.
ಕೈಗಾರಿಕೆಗಳಿಗೆ ಜಮೀನು ಬೇಕಾದಾಗ ಸರ್ಕಾರವು ರೈತರ ಜಮೀನನ್ನು ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೆ ಬಿಡಬೇಕು, ಬದಲಿಗೆ ಕೃಷಿಕರು ಕೊಟ್ಟರೆ ಪಡೆಯಬೇಕು. ಅಂತಹ ಕಾನೂನು ಜಾರಿ ಆಗಬೇಕು.ಸರ್ಕಾರ ಉದ್ದಿಮೆದಾರರು ಹಾಗೂ ರೈತರ ನಡುವೆ ದಲ್ಲಾಳಿಯಂತೆ ಕಾರ್ಯನಿರ್ವಹಿಸುವುದನ್ನು ಬಿಡಬೇಕು ಎಂದರು.