- * ಹಲವು ಜಿಲ್ಲೆಗಳಲ್ಲಿ ಶೇ. 50 ಮಳೆ ಕೊರತೆ
- * ಮುಂದಿನ ತಿಂಗಳು ಮತ್ತಷ್ಟು ಏರಿಕೆ ಬರೆ?
ಮುಂಗಾರು ಅಬ್ಬರಿಸಬೇಕಿದ್ದ ಈ ತಿಂಗಳಲ್ಲಿ ತೀವ್ರ ಬಿಸಿಲ ಅನುಭವ ಆಗುತ್ತಿದ್ದು, ‘ಇದು ಮಳೆಗಾಲವೋ.. ಬೇಸಿಗೆಯೋ’ ಎನ್ನುವಂತಾಗಿದೆ. ಮಳೆಯ ಕೊರತೆ ಹಾಗೂ ಏರುತ್ತಿರುವ ತಾಪಮಾನದಿಂದಾಗಿ ದಿನನಿತ್ಯ ಬಳಕೆಯ ತರಕಾರಿ ದರ ಗ್ರಾಹಕರ ಕೈಸುಡುತ್ತಿದೆ.
ರಾಜ್ಯದಲ್ಲಿ ಕೆಲವೆಡೆ ಮಳೆಯಾಗಿದ್ದರೂ, ಸರಾಸರಿ ಮಳೆಯ ಪ್ರಮಾಣದಲ್ಲಿ ಶೇ. 30 ಕೊರತೆ ಉಂಟಾಗಿದೆ. ಬಿಸಿಲಿನ ತಾಪ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಶೇ. 50 ಮಳೆ ಕೊರತೆಯಿಂದ ಬರ ಉಂಟಾಗಿದೆ. ಇದರಿಂದಾಗಿ ಇಳುವರಿ ಸಿಗದೆ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿರುವ ತರಕಾರಿ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ, ಕಳೆದೆರಡು ವಾರಗಳಿಂದ ತರಕಾರಿ ದರ ನಿರಂತರವಾಗಿ ಹೆಚ್ಚಳವಾಗುತ್ತಿದೆ.
ಕಳೆದೊಂದು ತಿಂಗಳಿಂದ ಮಳೆ ಇಲ್ಲದೆ, ಬಹುತೇಕ ಕಡೆ ಕೊಳವೆಬಾವಿಗಳೂ ಒಣಗಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಳೆಯಾದರೂ, ಅದು ಎಷ್ಟು ಪ್ರಮಾಣದಲ್ಲಿ ಆಗಲಿದೆ ಎಂಬ ಸ್ಪಷ್ಟತೆ ಇಲ್ಲದ ಕಾರಣ, ಜನರು ನೀರನ್ನು ಮಿತವಾಗಿ ಬಳಕೆ ಮಾಡಬೇಕಿದೆ. ರೈತರು ಸಹ ಕಡಿಮೆ ನೀರಿನ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ. ಮಳೆ ಕೈಕೊಟ್ಟರೆ ಮುಂಬರುವ ಶ್ರಾವಣ ತಿಂಗಳಲ್ಲಿ ಹಬ್ಬ ಹಾಗೂ ಮದುವೆ ಸಮಾರಂಭಗಳಿಗೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರೈತರಿಗೂ ನಷ್ಟ:
ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಂದ ತರಕಾರಿ ಹಾಗೂ ಹೂವು ಹೆಚ್ಚಿನ ಪ್ರಮಾಣದಲ್ಲಿ ನಗರದ ಮಾರುಕಟ್ಟೆಗಳಿಗೆ ಬರುತ್ತವೆ. ಆದರೆ ಬರದಿಂದಾಗಿ ನೆರೆಯ ಜಿಲ್ಲೆಗಳು ಮಾತ್ರವಲ್ಲದೆ ತಮಿಳುನಾಡಿನಿಂದ ಪೂರೈಕೆಯಾಗುತ್ತಿದ್ದ ಪ್ರಮಾಣವೂ ಕಡಿಮೆಯಾಗಿದೆ. ಒಂದೆಡೆ ಮಾರುಕಟ್ಟೆಗಳಿಗೆ ಪೂರೈಕೆ ಕೊರತೆಯಿಂದ ಗ್ರಾಹಕರಿಗೆ ಬೆಲೆಯ ಹೊರೆಯಾದರೆ, ಅತ್ತ ನೀರಿನ ಕೊರತೆ, ಬೆಳೆ ನಿರ್ವಹಣೆ ವೆಚ್ಚ ಹೆಚ್ಚಳದಿಂದಾಗಿ ಇಳುವರಿ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು.
ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಬಟಾಣಿ ₹200, ಬೀನ್ಸ್ ₹100, ನುಗ್ಗೆಕಾಯಿ ₹100, ಶುಂಠಿ ₹100, ಹಸಿ ಮೆಣಸಿನಕಾಯಿ ₹80, ದಪ್ಪ ಮೆಣಸಿನಕಾಯಿ ₹60, ಹೀರೇಕಾಯಿ ₹60, ಕ್ಯಾರೆಟ್ ₹60, ಬದನೆಕಾಯಿ ₹60, ಮೂಲಂಗಿ ₹50, ಟೊಮ್ಯಾಟೊ ₹25ಗೆ ಮಾರಾಟವಾಗುತ್ತಿವೆ. ಈರುಳ್ಳಿ 100 ರೂ.ಗೆ 3 ಕೆ.ಜಿ. ಇದ್ದರೆ ಬೆಳ್ಳುಳ್ಳಿ ಕೆ.ಜಿ.ಗೆ 350 ರೂ. ಇದೆ. ಬಡಾವಣೆಗಳಲ್ಲಿ ಇವುಗಳ ದರ ಮತ್ತೂ ಹೆಚ್ಚಾಗಿದೆ. ಬೀನ್ಸ್ ₹120, ಕ್ಯಾರೆಟ್ ₹100 ನಗಿದಯಾಗಿದೆ. ಯಾವುದೇ ತರಕಾರಿ ₹50ಗಿಂತ ಕಡಿಮೆ ದರದಲ್ಲಿ ಸಿಗುತ್ತಿಲ್ಲ.
ಸೊಪ್ಪಿನ ದರವೂ ಹೆಚ್ಚಳ
ಕೊತ್ತಂಬರಿ, ಪುದೀನ, ಕರಿಬೇವು, ಮೆಂತೆ, ಅರವೆ, ಪಾಲಕ್ ಇತ್ಯಾದಿ ಸೊಪ್ಪುಗಳಿಗೆ ಮಾರುಕಟ್ಟೆಗಳಲ್ಲಿ ಕಟ್ಟಿಗೆ 10ರಿಂದ 15 ರೂ. ಇದ್ದರೆ. ಹೊರಗೆ ಒಂದು ಕಟ್ 30 ರೂ.ಗೆ ಮಾರಾಟವಾಗುತ್ತಿದೆ.
ಹೂವಿನ ದರವೂ ಗಗನಮುಖಿ
ಮಳೆಯ ಕೊರತೆಯಿಂದ ಹೂವಿನ ದರವೂ ಏರಿಕೆಯಾಗಿದೆ. ಈಗ ಆಷಾಢ ಮಾಸ ಮದುವೆ ಸೇರಿ ಶುಭಸಮಾರಂಭಗಳು ನಡೆಯುವುದಿಲ್ಲ. ಆದರೆ ಈ ಮಾಸದಲ್ಲಿ ವಿಶೇಷವಾಗಿ ದೇವಿ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಹೆಚ್ಚಿಗಿಗಿರುತ್ತವೆ. ಮಠಗಳಲ್ಲೂ ಈ ಮಾಸಾದ್ಯಂತ ಪೂಜೆ ಪುನಸ್ಕಾರಗಳು, ಪ್ರವಚನಗಳು ನಡೆಯುತ್ತವೆ. ಹಾಗಾಗಿ ಹೂವಿಗೆ ಸಹಜವಾಗಿಯೇ ಬೇಡಿಕೆ ಇರುತ್ತದೆ. ಆದರೆ ಪೂರೈಕೆ ಕೊರತೆಯಿಂದಾಗಿ ದರದಲ್ಲಿ ತೀವ್ರ ಏರಿಕೆಯಾಗಿದೆ.
ಹೂವಿನ ದರ ಪಟ್ಟಿ (ಕೆ.ಜಿ.ಗಳಲ್ಲಿ)
ಮಳೆ ಇಲ್ಲದೆ ಕಳೆದ ಎರಡು ವಾರಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ತರಕಾರಿ ಹಾಗೂ ಹೂವು ಪೂರೈಕೆ ಆಗುತ್ತಿಲ್ಲ. ಮಳೆ ಬರದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗಲಿದ್ದು, ಹಬ್ಬಗಳು ಆರಂಭವಾಗುವ ವೇಳೆ ದರ ಮತ್ತೂ ಹೆಚ್ಚಲಿದೆ.
— - ಮಣಿಮಾರನ್, ಕೆ.ಆರ್. ಮಾರುಕಟ್ಟೆ ವ್ಯಾಪಾರಿ