ಕಲಬುರಗಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿದರು. ಬಸವರಾಜ ಮತ್ತಿಮಡು, ಡಾ.ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಅಶೋಕ ಬಗಲಿ, ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಮಹಾದೇವ ಬೆಳಮಗಿ ಇದ್ದರು.
- ಬಿಜೆಪಿ ವಕ್ತಾರ ರಾಜಕುಮಾರ ತೆಲ್ಕೂರ ಆಗ್ರಹ
- ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ
ಕಲಬುರಗಿ: ಕಳಂಕಿತ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡುವವರೆಗೆ ನಿರಂತರ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಬಿಜೆಪಿ ವಕ್ತಾರ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದ ನಾಗೇಂದ್ರ ವಿರುದ್ಧದ ಪ್ರಕರಣದಲ್ಲಿ ಇನ್ನೂ ಖುಲಾಸೆ ಆಗಿಲ್ಲ. ಆದರೂ ಡಿ.ಕೆ. ಶಿವಕುಮಾರ್ ಮಂತ್ರಿ ಮಾಡಿರುವುದನ್ನು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಹಲವಾರು ಕೋಟಿ ಹಗರಣ ನಡೆದಿದ್ದು, ಹಿಂದಿನ ಸಿಎಂ ಸಿದ್ದರಾಮಯ್ಯ ಸಹ ಒಪ್ಪಿಕೊಂಡಿದ್ದರು. ನಾಗೇಂದ್ರ ವಿರುದ್ಧ ಆರೋಪ ಪಟ್ಟಿಯೂ ಇದೆ. ವಾಲ್ಮೀಕಿ ನಿಗಮದಲ್ಲಿ ಎಸ್ಟಿ ಕಲ್ಯಾಣಕ್ಕೆ ಮೀಸಲಿದ್ದ ಹಣ ನುಂಗಿದವರನ್ನು ಸಚಿವರಾಗಿ ಮಾಡಿ ಪರಿಶಿಷ್ಟ ಪಂಗಡಕ್ಕೆ ದ್ರೋಹ ಬಗೆಯಲಾಗಿದೆ. ಇನ್ನು ನಿಗಮದ ಹಣ ಕೊಳ್ಳೆ ಹೊಡೆದು ತೆಲಂಗಾಣದಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಡ್ರಾ ಮಾಡಿ ಚುನಾವಣೆಗೆ ಬಳಸಿದ್ದರು ಎಂಬುದನ್ನು ಜಾರಿ ನಿರ್ದೇಶನಾಲಯ (ಇಡಿ)ದ ದಾಖಲೆಯಲ್ಲಿ ಉಲ್ಲೇಖವಾಗಿದೆ. ಈ ಹಗರಣದಲ್ಲಿ ಅಮಾಯಕ ಅಧಿಕಾರಿ ಚಂದ್ರಶೇಖರ ಎಂಬುವರು ಆತ್ಮಹತ್ಯೆ ಮಾಡಿಕೊಂಡರು. ಹೀಗಾಗಿ ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಅಮರನಾಥ ಪಾಟೀಲ್, ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಮಹಾದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ ಇದ್ದರು.
ನಾಗೇಂದ್ರ ವಿರುದ್ಧ 31 ಕೇಸ್ಗಳಿದ್ದರೂ ಸಚಿವ ಸ್ಥಾನ ನೀಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಇತ್ಯರ್ಥವಾಗುವವರೆಗೆ ಸಿಎಂ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನ ನೀಡಬಾರದು.
— > ಬಸವರಾಜ ಮತ್ತಿಮಡು ಶಾಸಕ, ಕಲಬುರಗಿ ಗ್ರಾಮೀಣ
ಹತ್ತಾರು ಪ್ರಕರಣ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು. ಪ್ರಕರಣ ಇತ್ಯರ್ಥವಾದ ಬಳಿಕ ಮಂತ್ರಿ ಮಾಡಿದರೆ ಅಭ್ಯಂತರವಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
— > ಡಾ.ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ