ಕಲಬುರಗಿ ಶರಣಬಸವ ವಿವಿ ಸ್ಥಾಪಿಸಲು ಉದ್ದೇಶಿಸಿರುವ ಡ್ರೋನ್ ಪ್ರಯೋಗಾಲಯಕ್ಕೆ ಕರ್ನಾಟಕ ಬ್ಯಾಂಕ್ ಸಿಎಸ್ಆರ್ ನಿಧಿಯಿಂದ 12.98 ಲಕ್ಷ ರೂ. ಚೆಕ್ ಅನ್ನು ಬ್ಯಾಂಕ್ ಅಧಿಕಾರಿಗಳು ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರಿಗೆ ಹಸ್ತಾಂತರಿಸಿದರು. ಪ್ರೊ.ಅನಿಲಕುಮಾರ ಬಿಡವೆ, ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಶಶಿಕಿರಣ, ಜಿ.ಸೋಮಶೇಖರ, ಆರ್.ಡಿ.ಗುರುರಾಜ ಇತರರಿದ್ದರು.
- ಕರ್ನಾಟಕ ಬ್ಯಾಂಕ್ ಸಿಎಸ್ಆರ್ ನಿಧಿಯಡಿ ರು.12.98 ಲಕ್ಷ ನೆರವು
- ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲಾವೃದ್ಧಿಗೆ ಪೂರಕ
ಕಲಬುರಗಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಬ್ಯಾಂಕ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ 12.98 ಲಕ್ಷ ರೂ. ನೆರವಿನಿಂದ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯ ಶೀಘ್ರದಲ್ಲೇ ಸ್ಥಾಪನೆಯಾಗಲಿದೆ.
ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಇತ್ತೀಚೆಗೆ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ವಿವಿ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹಾಗೂ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರಿಗೆ ಕರ್ನಾಟಕ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಮಲ್ಲನಗೌಡ ಬಿರಾದಾರ್ ಅವರು 12.98 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು. ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಶಶಿಕಿರಣ, ಕ್ಲಸ್ಟರ್ ಮುಖ್ಯಸ್ಥ ಕುಲಕರ್ಣಿ, ಆರ್ಎಲ್ಪಿಎಸ್ಸಿ ಮುಖ್ಯ ವ್ಯವಸ್ಥಾಪಕ ಜಿ.ಸೋಮಶೇಖರ ಹಾಗೂ ಶಾಖಾ ವ್ಯವಸ್ಥಾಪಕ ಆರ್.ಡಿ. ಗುರುರಾಜ ಉಪಸ್ಥಿತರಿದ್ದರು.
ಸುಸಜ್ಜಿತ ಪ್ರಯೋಗಾಲಯ: ಸಂಪೂರ್ಣ ಸುಸಜ್ಜಿತ ಡ್ರೋನ್ ಪ್ರಯೋಗಾಲಯ ಸ್ಥಾಪಿಸಲು ಕರ್ನಾಟಕ ಬ್ಯಾಂಕ್ ತನ್ನ ಸಿಎಸ್ಆರ್ ಯೋಜನೆಯಡಿ ನೀಡಿರುವ 12.98 ಲಕ್ಷ ರೂ.ಗಿಂತ ಹೆಚ್ಚಿನ ಹಣ ವೆಚ್ಚವಾಗಲಿದ್ದು, ಇದನ್ನು ವಿವಿ ಭರಿಸಿ ತನ್ನ ಮುಖ್ಯ ಆವರಣದಲ್ಲಿ ಅತ್ಯಾಧುನಿಕ ಲ್ಯಾಬ್ ಸ್ಥಾಪಿಸಲಿದೆ. ಈ ಪ್ರಯೋಗಾಲಯ ವಿದ್ಯಾರ್ಥಿಗಳ ಸಂಶೋಧನೆ, ನವೋದ್ಯಮ, ಕೌಶಲಾಭಿವೃದ್ಧಿ ಹಾಗೂ ಪಠ್ಯಕ್ರಮ ಆಧಾರಿತ ತಾಂತ್ರಿಕ ತರಬೇತಿಗೆ ಮಹತ್ತರ ಕೊಡುಗೆ ನೀಡಲಿದೆ. ಅತ್ಯಾಧುನಿಕ ತಾಂತ್ರಿಕ ಉಪಕರಣಗಳೊಂದಿಗೆ ಪ್ರಯೋಗಾಲಯ ತಂತ್ರಜ್ಞಾನ ಶಿಕ್ಷಣದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಜೀವನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಿದೆ.
ವಿದ್ಯಾರ್ಥಿಗಳಿಗೆ ನೇರ ಪ್ರಯೋಜನ
ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್ ಸ್ವಯಂಚಾಲನಾ ತಂತ್ರಜ್ಞಾನದಲ್ಲಿನ ಪ್ರಾಯೋಗಿಕ ಬೆಳವಣಿಗೆ ಅರಿತುಕೊಳ್ಳಲಿದ್ದು, ಮಾನವರಹಿತ ವೈಮಾನಿಕ ವಾಹನಗಳ ಪರಿಕಲ್ಪನೆ, ಕಾರ್ಯವಿಧಾನ ಮತ್ತು ಅದಕ್ಕೆ ಸಂಬಂಧಿಸಿದ ಅಲ್ಗಾರಿದಮ್ಗಳ ಕುರಿತು ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ. ಈ ಲ್ಯಾಬ್ನಿಂದ ಆರಂಭಿಕ ಹಂತದಲ್ಲೇ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್, ಮೆಕಾನಿಕಲ್, ಸಿವಿಲ್ ಹಾಗೂ ಎನರ್ಜಿ ಇಂಜಿನಿಯರಿಂಗ್ ಸೇರಿ ವಿವಿಧ ವಿಭಾಗಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇರ ಪ್ರಯೋಜನ ಪಡೆಯಲಿದ್ದಾರೆ.
ಡ್ರೋನ್ ಪ್ರಯೋಗಾಲಯ ಸ್ಥಾಪನೆಗಾಗಿ ಸಿಎಸ್ಆರ್ ನಿಧಿಯಿಂದ ಅನುದಾನ ಒದಗಿಸಿದ ಕರ್ನಾಟಕ ಬ್ಯಾಂಕ್ನ ಶೈಕ್ಷಣಿಕ ಸೇವೆ ಶ್ಲಾಘನೀಯ. ಶರಣಬಸವ ವಿವಿ ವಿದ್ಯಾರ್ಥಿಗಳಿಗಾಗಿ ಈ ನೆರವು ನೀಡಿದ ಬ್ಯಾಂಕ್ ಅಧಿಕಾರಿಗಳಿಗೆ ಕೃತತೆಗಳು.
— > ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಕುಲಾಧಿಪತಿ, ಶರಣಬಸವ ವಿವಿ ಕಲಬುರಗಿ