ಘಟನೆ ವಿವರಿಸಿದ ಸ್ಕೂಲ್ ಬಸ್ ಚಾಲಕ ಸಚಿನ್
- ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಬಸ್-ಲಾರಿ ಅಪಘಾತ
- ಚಿತ್ರದುರ್ಗದ ಹಿರಿಯೂರಿನ ಗೊರ್ಲತ್ತು ಕ್ರಾಸ್ ಬಳಿ ಅಪಘಾತ
- ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಬೆಂಕಿಗೆ ಆಹುತಿ
- ದುರಂತದಲ್ಲಿ 5ಕ್ಕೂ ಹೆಚ್ಚು ಮಂದಿ ಸಜೀವ ದಹನ
ಚಿತ್ರದುರ್ಗ: ಇಂದು (ಡಿ.25) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತದಲ್ಲಿ ಸುಮಾರು 5 ಪ್ರಯಾಣಿಕರು ಸಜೀವ ದಹನವಾಗಿದ್ದರೆ ಎಂಬ ಮಾಹಿತಿ ಲಭಿಸಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿ ಎಚ್ಪಿ ಪೆಟ್ರೋಲ್ ಬಂಕ್ ಬಳಿ ದುರಂತ ಸಂಭವಿಸಿದ್ದು, ಲಾರಿ ಗುದ್ದಿದ ರಭಸಕ್ಕೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು, ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಬಸ್ಗೆ ಲಾರಿ ಡಿಕ್ಕಿ ಹೊಡೆದ ಕೂಡಲೇ ಬಸ್ಸಿನಲ್ಲಿ ಬೆಂಕಿ ಸ್ಫೋಟಿಸಿದೆ. ಅಪಫಾತದಲ್ಲಿ ಲಾರಿ ಚಾಲಕ ಉತ್ತರ ಪ್ರದೇಶ ಮೂಲದ ಕುಲದೀಪ್ ಸಾವಿಗೀಡಾಗಿದ್ದು, ಬಸ್ ಡ್ರೈವರ್ ರಫೀಕ್ ಮತ್ತು ನಿರ್ವಾಹಕ ಪವಾಡದಂತೆ ಪಾರಾಗಿದ್ದಾರೆ.
ಸಂಪೂರ್ಣ ಸುಟ್ಟು ಕರಕಲಾದ ಬಸ್, 5 ಮೃತದೇಹಗಳು ಹೊರಗೆ
ಇಲ್ಲಿಯವರೆಗೆ ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರಲ್ಲಿ ಲಾರಿ ಚಾಲಕನ ಪತ್ತೆ ದೃಢವಾಗಿದೆ ಎಂದು ವರದಿಯಾಗಿದೆ. ಬಸ್ ಪ್ರಯಾಣಿಕರ ಪೈಕಿ ಇನ್ನೂ ಹಲವರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ, ಸಿಕ್ಕಿರುವ ದೇಹಗಳ ಡಿಎನ್ಎ ನಡೆಸಿ, ಸಾವಿಗೀಡಾದವರ ಗುರುತು ಪತ್ತೆಹಚ್ಚುವ ಕೆಲಸಗಳು ನಡೆಯುತ್ತಿವೆ. 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಯಾನಕ ಅನುಭವ ಬಿಚ್ಚಿಟ್ಟ ಮಕ್ಕಳಿದ್ದ ಬಸ್ ಚಾಲಕ
ಇನ್ನು ಈ ಅಪಘಾತ ಹೇಗಾಯಿತು? ಎಂಬ ಭಯಾನಕ ಅನುಭವ ಬಿಚ್ಚಿಟ್ಟ ಅದೇ ರಸ್ತೆಯಲ್ಲಿ 42 ಮಕ್ಕಳನ್ನು ದಾಂಡೇಲಿ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ ಚಾಲಕ ಸಚಿನ್, "ನಾವು ಸ್ಕೂಲ್ ಟ್ರಿಪ್ ಹೋಗ್ತಿದ್ವಿ. ನಮ್ಮ ಬಸ್ ಅನ್ನು ಸ್ಲೀಪರ್ ಕೋಚ್ ಬಸ್ ಓವರ್ಟೇಕ್ ಮಾಡಿತು. ಇದೇ ವೇಳೆಗೆ ಎದುರಿನಿಂದ ಬರುತ್ತಿದ್ದ ಲಾರಿ ಚಾಲಕ, ಡಿವೈಡರ್ ಹಾರಿಸಿ, ನೇರವಾಗಿ ಬಸ್ಗೆ ಗುದ್ದಿದ. ಡೀಸೆಲ್ ಟ್ಯಾಂಕ್ಗೆ ಡಿಕ್ಕಿಯಾದ ಕಾರಣದಿಂದ ಬಸ್ಸಿನಲ್ಲಿ ಬೆಂಕಿ ಸ್ಫೋಟಿಸಿತು" ಎಂದಿದ್ದಾರೆ.
ಲಾರಿ ಚಾಲಕನದ್ದೇ ತಪ್ಪು!
"ಲಾರಿ ಗುದ್ದಿದ ಕೂಡಲೇ ಸ್ಲೀಪರ್ ಕೋಚ್ ಬಸ್ ನಮ್ಮ ಬಸ್ಸಿಗೂ ಡಿಕ್ಕಿಯಾಯಿತು. ಗ್ಲಾಸ್ ಹೊಡೆದ ಕಾರಣ, ನನ್ನೊಬ್ಬನಿಗೆ ಸಣ್ಣ-ಪುಟ್ಟ ಗಾಯಾಗಳು ಆಗಿವೆ. ಮಕ್ಕಳಲ್ಲಿ ಯಾರೊಬ್ಬರಿಗೂ ತೊಂದರೆ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆ ನಂತರ ಇನ್ನೊಂದು ಬಸ್ ಮಾಡಿ, ಅಲ್ಲಿಂದ ಮಕ್ಕಳನ್ನು ಕಳುಹಿಸಿದೆವು" ಎಂದು ಸಚಿನ್ ಹೇಳಿದ್ದಾರೆ.