ಕೇಂದ್ರ ಬಸ್ ನಿಲ್ದಾಣದಲ್ಲಿ ನೀರಿಗೂ ಬರ 
ರಾಜ್ಯ

ಕೇಂದ್ರ ಬಸ್ ನಿಲ್ದಾಣದ ಕುಡಿಯುವ ನೀರಿಗೂ ಬರ!

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಬಸ್ ನಿಲ್ದಾಣದಲ್ಲಿಲ್ಲ ನೀರಿನ ವ್ಯವಸ್ಥೆ
  • ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನೀರಿಗೂ ಬರ
  • ಕಾಟಾಚಾರಕ್ಕೆ ವ್ಯವಸ್ಥೆ ಬೇಡ ಎನ್ನುತ್ತಿರುವ ಸಾರ್ವಜನಿರು
ಕೇಂದ್ರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೂ ಬರ !
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಸಂಪರ್ಕ ಕೊಂಡಿಯಾಗಿರುವ ನಗರದ ಹೈಟೆಕ್ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೂ ಬರ ಎದುರಾಗಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕಿಸುವ ಬಸ್ ನಿಲ್ದಾಣದಲ್ಲಿ ನಿತ್ಯ 2 ಸಾವಿರಕ್ಕೂ ಅಧಿಕ ಬಸ್ಸುಗಳು ಚಲಿಸುತ್ತವೆ. 50-60 ಸಾವಿರ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಪ್ರಯಾಣದ ನಿಮಿತ್ಯ ಆಗಮಿಸುತ್ತಾರೆ. ಆದರೆ ಜನರಿಗೆ ಮಾತ್ರ ಸಾರಿಗೆ ಇಲಾಖೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಟಲ್ ನೀರೇ ಗತಿ!
ಕೇಂದ್ರ ಬಸ್ ನಿಲ್ದಾಣದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಹಿನ್ನಲೆಯಲ್ಲಿ ವೃದ್ಧರು,ಮಹಿಳೆಯರು, ವಿದ್ಯಾರ್ಥಿಗಳು ನೀರಿನ ದಾಹ ತಿರಿಸಿಕೊಳ್ಳಲು ಅಂಗಡಿಗಳಲ್ಲಿ ಬಾಟಲ್ ನೀರು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಜಿಲ್ಲಾ ಕೇಂದ್ರ ಸ್ಥಳವಾಗಿರುವುದರಿಂದ ದೂರದ ಮೂಲಕ ಆಗಮಿಸುವ ಜನರು ಕುಡಿಯುವ ನೀರಿಗೂ ಹಣ ವ್ಯಯಿಸಬೇಕಾಗಿದೆ.
ಕಾಟಾಚಾರಕ್ಕೆ ಅರವಟ್ಟಿಗೆ ವ್ಯವಸ್ಥೆ!
ಬಿಸಿಲು ಹೆಚ್ಚಾದ ಹಿನ್ನಲೆ ಕಳೆದ ಹದಿನೈದು ದಿನದ ಹಿಂದೆ ಕೇಂದ್ರ ಬಸ್ ನಿಲ್ದಾಣದಲ್ಲಿ ಇಲಾಖೆಯಿಂದ ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡಲಾಗಿದೆ.ತಂಪಾದ ನೀರು ಜನರ ದಾಹ ತಣಿಸುವ ಮೂಲಕ ಪ್ರಯಾಣಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಕಾಟಾಚಾರಕ್ಕೆ ಎಂಬಂತೆ ವ್ಯವಸ್ಥೆ ಕಲ್ಪಿಸಿ ಕೈತೊಳೆದುಕೊಂಡ ಸಾರಿಗೆ ಇಲಾಖೆ ಅಧಿಕಾರಿಗಳು ನೀರಿನ ವ್ಯವಸ್ತೆ ಸ್ಥಗಿತಗೊಳಿಸಿದ್ದಾರೆ, ಸದ್ಯ ಮತ್ತೆ ಪ್ರಯಾಣಿಕರು ಕುಡಿಯಲು ನೀರಿಗಾಗಿ ಹಂಬಲಿಸಬೇಕಾಗಿದೆ.
ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಕಾಟಾಚಾರಕ್ಕೆ ನೀರಿನ ವ್ಯವಸ್ಥೆ ಕಲ್ಪಿಸುವುದು ಸರಿಯಲ್ಲ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.