Four booked for assaulting Bengaluru woman PSI
- ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್-ಇನ್ಸ್ಪೆಕ್ಟರ್ಗೆ ಬೆದರಿಕೆ, ನಿಂದನೆ ಆರೋಪ
- ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಭಟ್ಟರಹಳ್ಳಿ ಬಳಿ ನಡೆದ ಘಟನೆ.
- ವಕೀಲ, ಆತನ ವಿದ್ಯಾರ್ಥಿ ಸ್ನೇಹಿತ, ವಕೀಲರ ತಂದೆ, ಸಹೋದರ ವಿರುದ್ಧ ದೂರು.
- ರಾಂಗ್ ರೂಟ್‌ನಲ್ಲಿ ಬಂದ ಸ್ಕೂಟರ್ ತಡೆದಿದ್ದಕ್ಕೆ ಶುರುವಾದ ಕಲಹ.
Four booked for assaulting Bengaluru woman PSI:
ಕೆಆರ್ ಪುರಂನ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಒಬ್ಬರಿಗೆ ವಕೀಲ ಹಾಗೂ ಆತನ ಸಹಚರರು ಹಲ್ಲೆ ನಡೆಸಿ, ದೇಹದ ಬಗ್ಗೆ ಲೇವಡಿ ಮಾಡಿ, ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಮಹಿಳಾ ಪೊಲೀಸ್ ಕೊಟ್ಟ ದೂರಿನ ಮೇರೆಗೆ ಕೆಆರ್ ಪುರಂನ ಪೊಲೀಸರು, ಹೇಮಂತ್ ರೆಡ್ಡಿ, ಅವರ ಸಹೋದರ ಹರ್ಷಿತ್ ರೆಡ್ಡಿ, ಅವರ ತಂದೆ ರಾಧಾಕೃಷ್ಣ ರೆಡ್ಡಿ ಮತ್ತು ಸಹಚರ ರಾಹುಲ್ ಎಂಬ ನಾಲ್ವರು ಪುರುಷರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ರಾಂಗ್ ರೂಟ್‌ನಲ್ಲಿ ಬಂದಿದ್ದ ವಕೀಲರು
ಆಗಸ್ಟ್ 12 ರಂದು ಬೆಳಿಗ್ಗೆ ಸುಮಾರು 8:40ರ ಆಸುಪಾಸಿನಲ್ಲಿ ಮಹಿಳಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್, ಓಲ್ಡ್ ಮದ್ರಾಸ್ ರಸ್ತೆಯ ಭಟ್ಟರಹಳ್ಳಿ ಸಿಗ್ನಲ್ ಬಳಿ ಕಾರ್ಯನಿರತರಾಗಿದ್ದರು. ಈ ವೇಳೆ ಸ್ಕೂಟರ್ವೊಂದು ಒನ್ವೇನಲ್ಲಿ ಬಂದಿತ್ತು. ಇದನ್ನುಸಂಚಾರ ಕಾನ್‌ಸ್ಟೆಬಲ್ ಮಂಜುನಾಥ್ ತಡೆಹಿಡಿದರು. ಈ ವೇಳೆ ಸ್ಕೂಟರ್ ಸವಾರ ತಾನು ವಕೀಲನೆಂದು ಪರಿಚಯಿಸಿಕೊಂಡು ಜಗಳಕ್ಕಿಳಿದಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯಪ್ರವೇಶಿಸಿದ ಮಹಿಳಾ ಇನ್ಸ್‌ಪೆಕ್ಟರ್ ಮೇಲೆ ವಕೀಲ ಮತ್ತು ಆತನ ಸ್ನೇಹಿತ ಹಲ್ಲೆ ನಡೆಸಿ, ಕೈಯಿಂದ ಎಳೆದಾಡಿದ್ದಾರೆ. ಅಲ್ಲದೆ ವಕೀಲರ ತಂದೆ ಮಹಿಳಾ ಅಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿ, ದೇಹವನ್ನು ಕೋಣಕ್ಕೆ ಹೋಲಿಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳಾ ಅಧಿಕಾರಿಯ ಮೇಲಿನ ಹಲ್ಲೆ
ಸಂಚಾರ ದಟ್ಟಣೆ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಧ್ಯಪ್ರವೇಶಿಸಿದ ಮಹಿಳಾ ಎಸ್‌ಐ ಅವರನ್ನು ವಕೀಲರು ತಳ್ಳಿ, ಅವರ ಕೈಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ವಕೀಲನು ತನ್ನ ಸ್ನೇಹಿತನಾದ ವಿದ್ಯಾರ್ಥಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಆ ವಿದ್ಯಾರ್ಥಿಯೂ ಸಹ ಮಹಿಳಾ ಅಧಿಕಾರಿಯ ಕೈಯನ್ನು ಬಲವಾಗಿ ಎಳೆದು ಗಾಯಗೊಳಿಸಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಸಿಬ್ಬಂದಿಗೆ ವಕೀಲರು ಬೆದರಿಕೆ ಹಾಕಿದ್ದಾರೆ.
ದೇಹದ ಬಗ್ಗೆ ಅವಹೇಳನ ಹಾಗೂ ಬೆದರಿಕೆ
ಸಾರ್ವಜನಿಕರು ಮತ್ತು ಇತರ ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ಶಾಂತವಾಯಿತು. ಬಳಿಕ ಮಹಿಳಾ ಅಧಿಕಾರಿ ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ದೂರು ದಾಖಲಿಸಿದ್ದಾರೆ.
ಈ ಘಟನೆಯು ಸಂಚಾರ ಪೊಲೀಸ್ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹಿಳಾ ಇನ್ಸ್‌ಪೆಕ್ಟರ್ ವಿರುದ್ಧ ದೂರು
ಮತ್ತೊಂದೆಡೆ, ವಕೀಲರ ಸ್ನೇಹಿತನಾದ ವಿದ್ಯಾರ್ಥಿಯು ಮಹಿಳಾ ಎಸ್‌ಐ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಮೊಬೈಲ್ ಒಡೆದಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ, (ಏಜೆನ್ಸೀಸ್).