- ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟ,ಜೂನ್ 30 ರಿಂದ ಮೆನೆ-ಮನೆಗೆ ಬಿ.ಎಲ್.ಓ ಭೇಟಿ
ಕಲಬುರಗಿ: ಭಾರತ ಚುನಾವಣಾ ಆಯೋಗವು ಎಸ್.ಐ.ಆರ್ ಮೂರನೇ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಜೂನ್ 20 ರಿಂದ ಪ್ರಕ್ರಿಯೆ ಆರಂಭವಾಗಲಿದೆ. ಪರಿಷ್ಕರಣೆ ಭಾಗವಾಗಿ ಆಗಸ್ಟ್ 5ಕ್ಕೆ ಕರಡು ಮತದಾರರ ಪಟ್ಟಿ ಮತ್ತು ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ದಿ.01-10-2026 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಈ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯ ನಡೆಯಲಿದೆ. ಜೂನ್ 20 ರಿಂದ 29ರ ವರೆಗೆ ಚುನಾವಣಾ ಸಿಬ್ಬಂದಿಗೆ ತರಬೇತಿ, ಪೂರ್ವಸಿದ್ಧತೆಯ ಮುದ್ರಣ ಕಾರ್ಯ ಜರುಗಲಿದೆ. ಜೂನ್ 30 ರಿಂದ ಜುಲೈ 29ರ ವರೆಗೆ ಬಿ.ಎಲ್.ಓ.ಗಳು ಮನೆ-ಮನೆಗೆ ಭೇಟಿ ನೀಡಲಿದ್ದು, ಆಗಸ್ಟ್ 5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರ ವರೆಗೆ ಆಕ್ಷೇಪಣೆ ಆಹ್ವಾನಿಸಿ ಅಕ್ಟೋಬರ್ 3 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಕೊನೆಗೆ ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾ ಪಟ್ಟಿಯಂತೆ ಎಲ್ಲಾ ಕಾರ್ಯವು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲಾ 9 ವಿಧಾನ ಸಭಾ ಮತಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ ಈಗಾಗಲೆ ನಿರ್ದೇಶನ ನೀಡಲಾಗಿದೆ. ಇದಲ್ಲದೆ ವಿಧಾನಸಭಾ ಮತಕ್ಷೇತ್ರವಾರು ಮತಗಟ್ಟೆ ಮಟ್ಟದ ಏಜೆಂಟರನ್ನು (BLAs) ನೇಮಕ ಮಾಡುವ ಕುರಿತು ನೋಂದಾಯಿತ ರಾಜಕೀಯ ಪಕ್ಷದವರಿಗೂ ತಿಳಿಸಲಾಗಿದೆ. ಎಸ್.ಐ.ಆರ್ ಕುರಿತು ಸಾರ್ವಜನಿಕರಲ್ಲಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಆಯಾ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.