Dr. Purushottam Bilimale 
ರಾಜ್ಯ

ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡಕ್ಕೆ ಅನ್ಯಾಯ

ಪ್ರಮುಖ ಮುಖ್ಯಾಂಶಗಳು

  • * ಡಾ. ಪುರುಷೋತ್ತಮ ಬಿಳಿಮಲೆ ಬೇಸರ
  • * ಕರುಡು ನಿಯಮಗಳ ಪರಿಷ್ಕರಣೆಗೆ ಆಗ್ರಹ
ಬೆಂಗಳೂರು: ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡಕ್ಕೆ ಅನ್ಯಾಯವಾಗಿದ್ದು, ಈ ನಿಯಮಗಳ ಪರಿಷ್ಕರಣೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡ ಭಾಷೆಗೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸಲ್ಲಬೇಕಾದ ಆದ್ಯತೆಯನ್ನು ನೀಡದೆ ಅನ್ಯಾಯ ಮಾಡಲಾಗಿದೆ. ಕೂಡಲೇ ಈ ಧೋರಣೆಯನ್ನು ಕೈಬಿಟ್ಟು ಕರಡು ನಿಯಮಗಳ ಕನ್ನಡಸ್ನೇಹಿ ತಿದ್ದುಪಡಿಗೆ ಸರ್ಕಾರವು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಕನ್ನಡ ನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಪ್ರವೇಶ ಪಡೆಯುವ ಪರೀಕ್ಷೆಗಳಲ್ಲಿಯೇ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಸ್ಥಾನವನ್ನು ನೀಡುವುದು ನ್ಯಾಯಸಮ್ಮತವಲ್ಲ. ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರಿ ಇಲಾಖೆಗಳ ಲಿಪಿಕ ವರ್ಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಈ ನಿಯಮಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಪ್ರಭುತ್ವ ಪರೀಕ್ಷೆಗೆ ಸಮಾನ ಅಂಕಗಳನ್ನು ನಿಗದಿಪಡಿಸಿರುವ ಕ್ರಮವು ಗ್ರಾಮೀಣ- ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಡು ನಿಯಮಗಳ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ತಲಾ 35 ಅಂಕಗಳ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗುವ ಸಾಧ್ಯತೆ ಇದೆ. ಇದು 1963ರ ಕರ್ನಾಟಕ ರಾಜಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಉದ್ದೇಶಿತ ನಿಯಮಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 50 ಅಂಕಗಳು ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕಗಳನ್ನು ನಿಗದಿಪಡಿಸುವ ಮೂಲಕ ಕರಡು ನಿಯಮಗಳ ಪರಿಷ್ಕರಣೆಗೆ ಸರ್ಕಾರವು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.