- ತೊಗರಿ ನಾಡಿನಲ್ಲಿ ವಾರ್ತಾ ಇಲಾಖೆಯಿಂದ ಡಾ.ರಾಜ್ ಜನ್ಮ ದಿನಾಚರಣೆ
- ಜನರ ರಂಜಿಸಿದ ರಾಜಕುಮಾರ ಸಿನಿಮಾ ಹಾಡುಗಳು
ಕಲಬುರಗಿ : ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಅವರು ಕೇವಲ ನಟರಾಗಿರದೆ, ಕನ್ನಡ ನೆಲದ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕವಾಗಿದ್ದಾರೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಶುಕ್ರವಾರ ಕಲಬುರಗಿ ನಗರದ ಕನ್ನಡ ಭವನ ಆವರಣದ ಸುವರ್ಣ ಸಭಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಡಾ. ರಾಜಕುಮಾರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಾಜನೂರಿನ ಸಣ್ಣ ಹಳ್ಳಿಯಿಂದ ಬಂದು ಜಗದಗಲಕ್ಕೆ ಬೆಳಗಿದ ಅಣ್ಣಾವ್ರ ಸಾಧನೆ ಇಂದಿನ ಪೀಳಿಗೆಗೆ ಮಾದರಿ ಎಂದರು.
ಭಾಷಾ ರಕ್ಷಣೆಗಾಗಿ ನಡೆದ ಗೋಕಾಕ್ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡದ ಕಿಚ್ಚನ್ನು ಮನೆಮನಗಳಲ್ಲಿ ಹಚ್ಚಿದವರು. ರಾಜ್ ಅಜರಾಮರ ಹಾಗೂ 'ಬಂಗಾರದ ಮನುಷ್ಯ' ನಂತಹ ಚಿತ್ರಗಳ ಮೂಲಕ ಜನಮನ ಗೆದ್ದ ಅವರು ನಾಡು ನುಡಿಗೆ ನೀಇಡದ ಕೊಡುಗೆ ಅನನ್ಯ. ವೀರಪ್ಪನ್ ಅಪಹರಣದಂತಹ ಕಠಿಣ ಕಾಲದಲ್ಲೂ ಅವರು ತೋರಿದ ಧೈರ್ಯ ಅಪ್ರತಿಮ ಎಂದು ತಿಳಿಸಿದರು.
ಇದಕ್ಕು ಮುನ್ನ ಡಾ.ರಾಜ್ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರುನ್ನುಮ್ ಅವರು, ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜಕುಮಾರ ಕೇವಲ ನಟರಲ್ಲ, ಅವರು ಕರ್ನಾಟಕದ ಅಸ್ಮಿತೆ. ರಾಜಕುಮಾರ ಅವರ ಭಾಷಾ ಪ್ರೇಮ, ಗೋಕಾಕ್ ಚಳವಳಿಯ ನೇತೃತ್ವ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ಚಾಮರಾಜನಗರದಲ್ಲಿ ನಾನು ಸೇವೆ ಸಲ್ಲಿಸುವಾಗ ಅವರ ಕುಟುಂಬ ಮಾಡುತ್ತಿದ್ದ ಗುಪ್ತ ದಾನ ಹಾಗೂ ಶಾಲಾ-ಕಾಲೇಜುಗಳಿಗೆ ನೀಡುತ್ತಿದ್ದ ನೆರವನ್ನು ಹತ್ತಿರದಿಂದ ಕಂಡಿದ್ದೇನೆ. ವೀರಪ್ಪನ್ ಅಪಹರಣ ಹಾಗೂ ಅವರ ನಿಧನದ ಸಂದರ್ಭದಲ್ಲಿ ಜನ ತೋರಿದ ಅಭಿಮಾನ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದರು.
ಗುಲಬರ್ಗಾ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಅವರು ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣವಿಲ್ಲದಿದ್ದರೂ ರಂಗಭೂಮಿಯ ಮೂಲಕ ಬೆಳೆದು, ಅಭಿನಯ ಹಾಗೂ ಗಾಯನದಿಂದ ಕೋಟ್ಯಂತರ ಕನ್ನಡಿಗರ ಮನಗೆದ್ದವರು ಡಾ. ರಾಜಕುಮಾರ್. ಅವರ ಸರಳತೆ ಮತ್ತು ಕಲಾ ಸೇವೆ ಚಿತ್ರರಂಗದ ಇತಿಹಾಸದಲ್ಲಿ ಇಂದಿಗೂ ಅಜರಾಮರವಾಗಿದ್ದಾರೆ ಎಂದರು.
ರಸಮಂಜರಿಗೆ ತಲೆದೂಗಿದ ಕಲಾಭಿಮಾನಿಗಳು: ಸುಖಿ ಮೇಲೋಡಿಸ್ ತಂಡದ ಗಾಯಕರಾದ ಆನಂದ ಪಾಟೀಲ, ಕವಿತಾ ಹಿರೇಮಠ, ಅನ್ನಪೂರ್ಣ ಚವ್ಹಾಣ, ಸಾಗರ ಡಿ. ವಾಗ್ಮರೆ, ರವೀಂದ್ರ ಕುಲಕರ್ಣಿ, ಸಿದ್ರಾಮ ಹಂಚಿನಾಳ ಅವರು ರಾ.ರಾಜ್ ಕುಮಾರ್ ಅಭಿನಯದ ವಿವಿಧ ಚಲನಚಿತ್ರ ಗೀತೆಗಳ ಹಾಡುವ ಮೂಲಕ ಸಔಇಕರನ್ನು ರಂಜಿಸಿದರು. ಎರಡು ಕನಸು ಚಿತ್ರದ “ಎಂದೆAದು ನಿನ್ನನು ಮರೆತು”, “ತಮ್‌ನಮ್ ತಮ್‌ನಮ್” “ಪೂಜಿಸಲೆಂದೆ ಹೂಗಳ ತಂದೆ”, ರವಿಚಂದ್ರ ಚಿತ್ರದ “ನಾ ನಿನ್ನ ಆಸೆ ಕಂಡೆ”, ಗುರಿ ಚಿತ್ರದ “ಕಲ್ಲಿನ ವೀಣೆಯ ಮೀಟಿದರೇನು”, ಹೊಸ ಬೆಳಕು ಚಿತ್ರದ “ಹೊಸ ಬೆಳಕು ಮೂಡುತ್ತಿದೆ”, ನಾ ನಿನ್ನ ಮರೆಯಲಾರೆ ಚಿತ್ರದ “ನಾ ನಿನ್ನ ಮರೆಯಲಾರೆ”, ದೇವತಾ ಮನುಷ್ಯ ಚಿತ್ರದ “ಹೃದಯದಲ್ಲಿ ಇದೇನಿದು” ಹೀಗೆ ಅನೇಕ ಗೀತೆಗಳು ಕಲಾಭಿಮಾನಿಗಳನ್ನು ತಲೆದೂಗಿಸಿದವು. ಕಲಾವಿದ ಮಧುಸೂಧನ ಮಲ್ಲಾಬಾದಿ ಅವರು ವಿಶೇಷವಾಗಿ ರಾಜ್ ಧ್ವನಿಯಲ್ಲಿ ಹಾಡುವ ಮೂಲಕ ಗಮನ ಸೆಳೆದರು. ಕೊನೆಗೆ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡಿ ಗಾಯನ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಹಿರಿಯ ಸಾಹಿತಿ ಭೀಮಣ್ಣ ಬೋನಾಳ, ಪತ್ರಕರ್ತ ಭವಾನಿ ಸಿಂಗ್ ಸೇರಿದಂತೆ ಕಸಾಪ ಪದಾಧಿಕಾರಿಗಳು, ಸಾಹಿತಿಗಳು, ಡಾ.ರಾಜ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು, ವಿ.ಜಿ. ಮಹಿಳಾ ಪದವಿ ಕಾಲೇಜು ಮತ್ತು ಸಿದ್ದಾರ್ಥ ಕಾನೂನು ಪದವಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸರ್ವರನ್ನು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿ ವಂದಿಸಿದರು.