ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡ ಚಿತ್ರನಟ ಡಾ.ರಾಜಕುಮಾರ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂ ಉದ್ಘಾಟಿಸಿದರು. ರಾಜು ಬಾವಿಹಳ್ಳಿ, ಬಾಬುರಾವ ಕಾಡ್ಲೂರ್, ಡಾ.ಹರೀಶ್ ರಾಥೋಡ್ ಸುಲೈಮಾನ್ ನದಾಫ್, ಪ್ರೊ.ಗುರುಪ್ರಸಾದ್ ವೈದ್ಯ ಇತರರಿದ್ದರು.
- ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಭಿಮತ
- ಯಾದಗಿರಿಯಲ್ಲಿ ನಟಸಾರಭೌಮನ ಜನ್ಮದಿನ ಆಚರಣೆ
ಯಾದಗಿರಿ: ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ, ಡಾ.ರಾಜ್ಕುಮಾರ್ ಅವರು ಕೇವಲ ನಟರಾಗಿರದೆ, ಕನ್ನಡ ನೆಲ&ಜಲ ತಮ್ತು ಭಾಷೆಯ ಉಳಿವಿಗಾಗಿ ಹೋರಾಟ ಮಾಡಿದ ಮೇರು ವ್ಯಕ್ತಿತ್ವದ ನಟ ಡಾ.ರಾಜ್ಕುಮಾರ್ ಆಗಿದ್ದಾರೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂ ಹೇಳಿದರು.
ಶನಿವಾರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಡಾ.ರಾಜ್ಕುಮಾರ್ ಜಯಂತಿ ಸಮಿತಿ ಆಶ್ರಯಲದಲ್ಲಿ ಆಯೋಜಿಸಿದ್ದ, ಡಾ.ರಾಜ್ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಗಾಜನೂರಿನ ಸಣ್ಣ ಹಳ್ಳಿಯಿಂದ ಬಂದು ರಾಜ್ಯ, ರಾಷ್ಟ್ರ, ವಿಶ್ವದಲ್ಲಿ ಖ್ಯಾತಿ ಪಡೆದ ಡಾ.ರಾಜ್ ಅವರ ಸಾಧನೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದ ಅವರು ತಮ್ಮ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರೊಂದಿಗೆ ಪ್ರೀತಿ, ವಾತ್ಸಲ್ಯದಿಂದ ಇದ್ದು, ಅವರ ಒಳ್ಳೆಯ ಗುಣಗಳು ಹಾಗೂ ಕನ್ನಡ ಭಾಷೆ ಉಳಿವಿಗಾಗಿ ಆರಂಭಿಸಿದ ಗೋಕಾಕ್ ಚಳುವಳಿ ನಿಮಿತ್ತ ಯಾದಗಿರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಡಾ.ರಾಜ್ ಅವರೊಂದಿಗೆ ಭೇಟಿಯಾದ ಕ್ಷಣಗಳನ್ನು ಶಾಸಕರು ಸ್ಮರಿಸಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ, ಕನ್ನಡ ಭಾಷಾ ರಕ್ಷಣೆಗಾಗಿ ನಡೆದ ಗೋಕಾಕ್ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡದ ಕಿಚ್ಚು ಮನೆಮನಗಳಲ್ಲಿ ಹಚ್ಚಿದರು. ಈ ಚಳವಳಿಯು ತನ್ನ ತಾಯ್ನಾಡಿಗೆ ಸೇವೆ ಎಂದು ಭಾವಿಸಿದ್ದ ಡಾ.ರಾಜ್ಕುಮಾರ್ ಅವರು ಬೇಡರ ಕಣ್ಣಪ್ಪ ಪ್ರಥಮ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹೇಳಿದರು.
ಬಂಗಾರದ ಮನುಷ್ಯ ಶ್ರೀಕೃಷ್ಣ ದೇವರಾಯ ಚಿತ್ರಗಳ ಮೂಲಕ ಜನಮನ ಗೆದ್ದ ಅವರು, ನಾಡು ನುಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರು ವೀರಪ್ಪನ್ ಅಪಹರಣದಂತಹ ಕಠಿಣ ಕಾಲದಲ್ಲೂ ವೈರಿಗೂ ಯೋಗ ಹಾಗೂ ಆರೋಗ್ಯದ ಜೀವನಶೈಲಿ ಕಲಿಸಿದ ರೀತಿ, ತಮ್ಮ ಮಂಡಿನೋವು ಮಧ್ಯೆ ಕಷ್ಟ ಕಾಲದಲ್ಲೂ ತೋರಿದ ಧೈರ್ಯ ಅಪ್ರತಿಮವಾಗಿದೆ ಎಂದು ಸ್ಮರಿಸಿದರು.
ಡಾ.ರಾಜಕುಮಾರ ಅವರ ಭಾಷಾ ಪ್ರೇಮ, ಗೋಕಾಕ್ ಚಳವಳಿಯ ನೇತೃತ್ವ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಗೌರವ ಡಾಕ್ಟರೇಟ್ ಪದವಿ, ಪದ್ಮಭೂಷಣ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಕರ್ನಾಟಕದ ಹೆಮ್ಮೆಯ ಸುಪುತ್ರ ಎಂದು ಹೇಳಿದರು.
ಈ ವೇಳೆ ಕಾಲೇಜು ವಿದ್ಯಾರ್ಥಿನಿಯರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೂಡ ಗಾಯಕರೊಂದಿಗೆ ರಾಗಜೋಡಿಸಿ ಹಾಡಿದರು. ಪ್ರೋ. ಗುರುಪ್ರಸಾದ್ ವೈದ್ಯ, ಪ್ರೋ.ಡಾ.ಜಗದೀಶ ವಿದ್ಯಾರ್ಥಿನಿಯರಾದ ತಾಯಮ್ಮ ಧ್ವನಿಗೂಡಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಹರೀಶ್ ರಾಥೋಡ್ ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್ ಸ್ವಾಗತಿಸಿದರು. ಪ್ರೊ. ಗುರುಪ್ರಸಾದ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಭೀಮಣ್ಣ ನಾಯಕ, ವಿಜಯಲ್ಮ ಇತರರಿದ್ದರು.