ವಿ.ಕೃ. ಗೋಕಾಕ್ ಪ್ರಶಸ್ತಿಗೆ ಡಾ.ಎನ್​. ಜಗದೀಶ್ ಕೊಪ್ಪ ಆಯ್ಕೆ 
ರಾಜ್ಯ

ವಿ.ಕೃ. ಗೋಕಾಕ್ ಪ್ರಶಸ್ತಿಗೆ ಡಾ.ಎನ್​. ಜಗದೀಶ್ ಕೊಪ್ಪ ಆಯ್ಕೆ: ಆ.29 ಭಾರತೀಯ ವಿದ್ಯಾಭವನದಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಸೃಜನಶೀಲ ಆಲೋಚನೆಗಳ ಮೂಲಕ ಹೆಸರುವಾಸಿಯಾದ ಜಗದೀಶ್ ಕೊಪ್ಪ ಅವರನ್ನು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ ಕೊಡಮಾಡುವ 2026ನೇ ಸಾಲಿನ ವಿ.ಕೃ ಗೋಕಾಕ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಟ್ರಸ್ಟ್​ ಅಧ್ಯಕ್ಷರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಗೌರವಾಧ್ಯಕ್ಷ ಅನಿಲ್ ಗೋಕಾಕ್, ಎಚ್.ಎನ್. ಸುರೇಶ್ ಮತ್ತು ಅಭಿನವ ರವಿಕುಮಾರ್ ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿಯು 25,000 ರೂ. ನಗದು ಮತ್ತು ಫಲಕವನ್ನು ಒಳಗೊಂಡಿದ್ದು, ಇದೇ ಆ.29ರಂದು ಶನಿವಾರ ಸಂಜೆ 6ರಿಂದ 8 ರವವರೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಡಾ.ಎನ್. ಜಗದೀಶ್​ ಕೊಪ್ಪ ಅವರ ಬಗ್ಗೆ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ 1956ರಲ್ಲಿ ಹುಟ್ಟಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ಜಾಗತೀಕರಣ ಮತ್ತು ಗ್ರಾಮಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 1981ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2001ರಿಂದ 2019 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯ ಟಿವಿ ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.  
ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ಬರವಣಿಗೆ ಆರಂಭಿಸಿ, ವಿಜ್ಞಾನ, ಇತಿಹಾಸ, ಸಾಹಿತ್ಯ, ಜೀವನಚರಿತ್ರೆ, ಅಭಿವೃದ್ಧಿ ಮತ್ತು ಪರಿಸರ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ಕಲಾವಿದರ ಜೀವನಚರಿತ್ರೆ ಹಾಗೂ ಅನುವಾದ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ 45 ಕೃತಿಗಳನ್ನು ರಚಿಸಿದ್ದಾರೆ. 2013ರಲ್ಲಿ ಭಾರತದ ನಕ್ಸಲ್ ಇತಿಹಾಸ ಕುರಿತ ‘ಎಂದೂ ಮುಗಿಯದ ಯುದ್ಧ’ ಕೃತಿಗೆ ಮತ್ತು 2015ರಲ್ಲಿ ಜಿಮ್ ಕಾರ್ಬೆಟ್ ಜೀವನಚರಿತ್ರೆ ‘ಬಿಳಿಸಾಹೇಬನ ಭಾರತ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ಮರುಭೂಮಿಯಹೂ ಅನುವಾದ ಕೃತಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅತ್ಯುತ್ತಮ ಅನುವಾದ ಪ್ರಶಸ್ತಿ ಲಭಿಸಿದೆ.
ಪತ್ರಿಕೋದ್ಯಮದ ಸೇವೆಗಾಗಿ 2015ರಲ್ಲಿ ಕರ್ನಾಟಕ ಸರ್ಕಾರದಿಂದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು 2017ರಲ್ಲಿ ಹೆಚ್,ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 2018ರಲ್ಲಿ ಬೆಳಗಾವಿಯ ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ನಿಂದ ಬಸವರಾಜ ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರಿನ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಪ್ರಶಸ್ತಿ ಹಾಗೂ ಬಿ.ಎಂ. ಶ್ರೀ ಪ್ರತಿಷ್ಠಾನದ ಪ್ರಶಸ್ತಿ ಗೌರವಗಳು ಸಂದಿವೆ.