ಬೆಂಗಳೂರು : ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ಸಿ. ಸಿದ್ದರಾಜು ಅವರು ಭಾರತೀಯ ಫೌಂಡ್ರಿಮನ್ ಸಂಸ್ಥೆಯ (ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್) ದಕ್ಷಿಣ ವಲಯದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಂಸ್ಥೆಯ 65ನೇ ವಾರ್ಷಿಕ ಪ್ರಾದೇಶಿಕ ಸಭೆಯಲ್ಲಿ ಅವರು ನೂತನ ಜವಾಬ್ದಾರಿ ಸ್ವೀಕರಿಸಿದರು. ಎಂ.ಎಸ್.ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಡಾ. ಸಿದ್ದರಾಜು ನೇಮಕವು ಶೈಕ್ಷಣಿಕ ಮತ್ತು ಕೈಗಾರಿಕಾ ವಲಯದ ನಡುವಿನ ಸಹಕಾರಕ್ಕೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ.
ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶ, ಬೆಂಗಳೂರು, ಬೆಳಗಾವಿ, ಚೆನ್ನೈ, ಕೊಯಮತ್ತೂರು, ಕೇರಳ, ಶಿವಮೊಗ್ಗ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧ ಪ್ರದೇಶಗಳ ಫೌಂಡ್ರಿ ಉದ್ಯಮದ ಪ್ರತಿನಿಧಿಗಳು ಮತ್ತು ಸಂಸ್ಥೆಯ ಕೌನ್ಸಿಲ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಾದೇಶಿಕ ಮಟ್ಟದಲ್ಲಿ ಸಂಸ್ಥೆಯ ಚಟುವಟಿಕೆಗಳನ್ನು ಬಲಪಡಿಸುವುದು, ಫೌಂಡ್ರಿ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ, ಸಂಶೋಧನೆ ಹಾಗೂ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಹಯೋಗದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.