ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಚುನಾವಣಾ ಆಯೋಗ ಸಹ ಜೂನ್‌ನಲ್ಲಿ ಖಾಲಿಯಾಗುವ 7 ಸ್ಥಾನಕ್ಕೆ ಹೊಸ ಸದಸ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.
ಜೂನ್, ಜುಲೈನಲ್ಲಿ ಖಾಲಿಯಾಗುವ 9 ಸ್ಥಾನಗಳ ಅವಕಾಶಕ್ಕಾಗಿ ಆಕಾಂಕ್ಷಿಗಳ ಪಟ್ಟಿ 3 ಡಜನ್ ಆಗಿದೆ. ಇದೇ ಸಲುವಾಗಿ ಅವಕಾಶಕ್ಕಾಗಿ ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಆಕಾಂಕ್ಷಿಗಳ ತಂಡವೊಂದು ಸೋಮವಾರವೇ ದೆಹಲಿಗೆ ಪ್ರಯಾಣ ಬೆಳೆಸಿದೆ.
ನಾಮನಿರ್ದೇಶನ ಮತ್ತು ವಿಧಾನಸಭೆಯಿಂದ ಆಯ್ಕೆಯಾಗಿರುವ 12 ಸದಸ್ಯರು ನಿವೃತ್ತಿಯಾಗಲಿದ್ದಾರೆ. ಈ ಪೈಕಿ 9 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ. ಪರಿಷತ್ ಸ್ಥಾನಗಳು ಖಾಲಿಯಾದ ಮೇಲೆ ಹೊಸ ಆಯ್ಕೆಗೆ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಆ ನಂತರ ಪ್ರಕ್ರಿಯೆ ಶುರುವಾಗಲಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ವರಿಷ್ಠರಿಗೆ ಮನವಿ ಸಲ್ಲಿಸಲು ದೆಹಲಿಗೆ ಪ್ರಯಾಣ ಬೆಳೆಸಿರುವುದಾಗಿ ಆಕಾಂಕ್ಷಿಯೊಬ್ಬರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಯಾರೆಲ್ಲ ನಿವೃತ್ತಿ?:
ಪರಿಷತ್ತಿಗೆ ನಾಮನಿರ್ದೇಶನವಾಗಿದ್ದ ಬಿಜೆಪಿಯ ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಸಿದ್ಧಿ, ಡಾ.ತಳವಾರ ಸಾಬಣ್ಣ, ಕಾಂಗ್ರೆಸ್‌ನ ರಮೇಶ್ ಬಾಬು ಜುಲೈನಲ್ಲಿ ನಿವೃತ್ತಿಯಾಗಲಿದ್ದಾರೆ. ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್‌ನ ಗೋವಿಂದರಾಜು, ಕಾಂಗ್ರೆಸ್‌ನ ನಸೀರ್ ಅಹ್ಮದ್, ಬಿಜೆಪಿಯ ಎನ್. ನಾಗರಾಜು (ಎಂಟಿಬಿ), ಕೆ.ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರ್, ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಮತ್ತು ತಿಪ್ಪಣ್ಣ ಕಮಕನೂರ ಜೂನ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.
ಆಕಾಂಕ್ಷಿಗಳ ಪಟ್ಟಿ
ಎ.ಎನ್.ನಟರಾಜ್‌ಗೌಡ, ಬಿ.ಆರ್.ನಾಯ್ಡು, ಅನಿಲ್ ತಡ್ಕಲ್, ಕಾಂತನಾಯಕ್, ನಟರಾಜ್, ರಾಜೇಶ್ವರಿ ಪಾಟೀಲ್, ಪುಷ್ಪಾ ಅಮರನಾಥ್, ತಿಪ್ಪೇಸ್ವಾಮಿ, ಸುನೀಲ್ ಹನುಮಣ್ಣವರ್, ಮೆಹರೋಜ್ ಖಾನ್, ನಿಜಾಮ್ ೈಜಾಕ್, ಎಂ.ವೆಂಕಟೇಶ್ ಹಾಗೂ ನಿವೃತ್ತಿ ಬಳಿಕ ಮರು ಆಯ್ಕೆ ಬಯಸುವವರ ಪಟ್ಟಿಯಲ್ಲಿ ರಮೇಶ್ ಬಾಬು, ಬಿ.ಕೆ.ಹರಿಪ್ರಸಾದ್ ಪ್ರಬಲವಾಗಿದ್ದಾರೆ.