ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಹಂಸಿಣಿಯ ಮರಿ ಗರ್ಭದಲ್ಲೇ ಸಾವು! Hippo Attack  
ರಾಜ್ಯ

ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಹಂಸಿಣಿಯ ಮರಿ ಗರ್ಭದಲ್ಲೇ ಸಾವು! Hippo Attack

ಪ್ರಮುಖ ಮುಖ್ಯಾಂಶಗಳು

  • ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ನೀರಾನೆ ಹಂಸಿಣಿಯ ಮರಿ ಗರ್ಭದಲ್ಲೇ ಸಾವು
  • ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಮಗು ಕಳೆದುಕೊಂಡ ನೀರಾನೆ ಹಂಸಿಣಿ
  • ನೀರಾನೆ ಮರಿ ಗರ್ಭದಲ್ಲೇ ಸೋಂಕಿನಿಂದ ಮೃತಪಟ್ಟಿದೆ ಎಂದ ಹುಲಿ ಮತ್ತು ಸಿಂಹಧಾಮದ ನಿರ್ದೇಶಕ ಅಮರಾಕ್ಷರ
  • ಈ ಬಾರಿಯಾದರೂ ಮರಿ ಉಳಿಯಬಹುದೆಂಬ ನಿರೀಕ್ಷೆಯಲ್ಲಿದ್ದ ಸಫಾರಿ ಸಿಬ್ಬಂದಿಗೆ ಮತ್ತೆ ನಿರಾಸೆ
ಶಿವಮೊಗ್ಗ: ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ತರಬೇತಿನಿರತ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೇಲೆ ದಾಳಿ ಮಾಡಿ ( Hippo Attack ) ಬಲಿ ಪಡೆದಿದ್ದ ನೀರಾನೆ ಹಂಸಿಣಿಯ ಮರಿ ಗರ್ಭದಲ್ಲೇ ಮೃತಪಟ್ಟಿದೆ.
ತುಂಬು ಗರ್ಭಿಣಿಯಾಗಿದ್ದ ಹಂಸಿಣಿ ಹೆರಿಗೆ ಅವಧಿ ಮುಗಿದ್ದರೂ ಮರಿ ಹಾಕಿರಲಿಲ್ಲ. ಹಾಗಾಗಿ ಹಂಸಿಣಿ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ಮೈಸೂರು ಮತ್ತು ಬನ್ನೇರುಘಟ್ಟ ಝೂನಿಂದ ತಜ್ಞ ಪಶು ವೈದ್ಯರ ತಂಡವೇ ಆಗಮಿಸಿ ತಪಾಸಣೆ ನಡೆಸಿತ್ತು. ಕಳೆದೆರಡು ದಿನದಿಂದ ಚಿಕಿತ್ಸೆ ನೀಡಿತ್ತು. ಮರಿ ಹಾಕದ ಕಾರಣ ಶುಕ್ರವಾರವಷ್ಟೇ ರಕ್ತ ಮತ್ತು ದೇಹದ ಕೆಲ ಮಾದರಿ ಸಂಗ್ರಹಿಸಿ ಕೊಂಡೊಯ್ದಿತ್ತು.
ಇದೀಗ ಹಂಸಿಣಿಯ ಮರಿ ಗರ್ಭದಲ್ಲೇ ಸೋಂಕಿನಿಂದ ಮೃತಪಟ್ಟಿದೆ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಅಮರಾಕ್ಷರ ದೃಢಪಡಿಸಿದ್ದಾರೆ. 

20 ದಿನದಿಂದ ಆಹಾರ ತ್ಯಜಿಸಿದ್ದ ಹಂಸಿಣಿ 

ತ್ಯಾವರೆಕೊಪ್ಪ ಸಫಾರಿಯಲ್ಲಿ ಕರ್ತವ್ಯದಲ್ಲಿದ್ದ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ತುಂಬು ಗರ್ಭಿಣಿಯಾಗಿದ್ದ ನೀರಾನೆಯ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದರು. ಮಾ.17ರಿಂದಲೇ ಆಹಾರ ಸೇವನೆ ಮಾಡುತ್ತಿರಲಿಲ್ಲ ಮತ್ತು ನೀರಿನಿಂದ ಮೇಲೆ ಬಂದಿರಲಿಲ್ಲ. ಹಾಗಾಗಿ ಡಾ. ಸಮೀಕ್ಷಾ ರೆಡ್ಡಿ ಮಾ.19ರಂದು ರಾತ್ರಿ ತಪಾಸಣೆ ತೆರಳಿದ್ದರು. ಈ ವೇಳೆ ನೀರಾನೆ ಏಕಾಏಕಿ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕಳೆದ 20 ದಿನಗಳಿಂದ ನೀರಾನೆ ಆಹಾರ ತ್ಯಜಿಸಿತ್ತು ಎನ್ನಲಾಗಿದೆ.

ಮೃಗಾಲಯದ ಸಿಬ್ಬಂದಿಗೆ ನಿರಾಸೆ

ಹಂಸಿಣಿಯು ಮರಿಯನ್ನು ಕಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದು ಮೂರನೇ ಬಾರಿ. ಈ ಹಿಂದೆಯೂ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿದ್ದ ಹಂಸಿಣಿ ಹುಟ್ಟಿದ ಕೆಲವೇ ದಿನಗಳಲ್ಲಿ ಅವುಗಳನ್ನು ಕಳೆದುಕೊಂಡಿತ್ತು. ಈ ಬಾರಿಯಾದರೂ ಮರಿ ಉಳಿಯಬಹುದೆಂಬ ನಿರೀಕ್ಷೆಯಲ್ಲಿದ್ದ ಸಫಾರಿ ಸಿಬ್ಬಂದಿಗೆ ಮತ್ತೆ ನಿರಾಸೆಯಾಗಿದೆ.