HD Kumaraswamy | ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ 
ರಾಜ್ಯ

ರಣಹೇಡಿಯಂತೆ ಪಲಾಯನ ಮಾಡಲ್ಲ!.. ಸೋತರೂ ಬಾಹುಬಲಿಯಂತೆ ಇರುತ್ತೇನೆ; ಸಿಎಂ ಟ್ವೀಟ್‌ಗೆ ಎಚ್‌ಡಿಕೆ ಖಡಕ್ ಕೌಂಟರ್ | HD Kumaraswamy

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಫೋನ್ ಕದ್ದಾಲಿಕೆ ಸದ್ದು ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಈ ವಾಕ್ಸಮರ ಈಗ ವೈಯಕ್ತಿಕ ವಾಗ್ದಾಳಿಗಳಿಗೆ ತಿರುಗಿದೆ.
ಈ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಸಿಎಂಗೆ ತಿರುಗೇಟು ನೀಡಿರುವ ಎಚ್​​ಡಿಕೆ, ಸಿದ್ಧರಾಮಯ್ಯನವರೇ ನೀವು ಕೆಲಸಕ್ಕಿಂತ ಕೌಂಟರ್ ಕೊಡುವುದರಲ್ಲಿ ಹೆಚ್ಚು ಬಿಜಿಯಾಗಿದ್ದೀರಿ ಎಂದು ಟಾಂಗ್ ನೀಡಿದ್ದಾರೆ.

ಕೇಂದ್ರ ಸಚಿವ ಎಚ್​​.ಡಿ. ಕುಮಾರಸ್ವಾಮಿ ಪೋಸ್ಟ್​

ಶ್ರೀಮಾನ್ ಸಿದ್ದರಾಮಯ್ಯನವರೇ, ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ! ಎಂದು ಮಾತು ಆರಂಭಿಸಿರುವ ಕುಮಾರಸ್ವಾಮಿ, ಫೋನ್ ಕದ್ದಾಲಿಕೆ ವಿಚಾರದಲ್ಲಿ ಸಿಎಂ ಗಾಬರಿಯಾಗುತ್ತಿರುವುದನ್ನು ವ್ಯಂಗ್ಯವಾಡಿದ್ದಾರೆ.
ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಎಂದು ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿವೆ, ಅದಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ ಅಷ್ಟೇ. ಆದರೆ ನಿಮ್ಮ ಪುಂಖಾನುಪುಂಖ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ ಇದ್ದಂತಿದೆ ಎಂದು ಟಾಂಗ್ ನೀಡಿದ್ದಾರೆ.
ಇದು ನಿಮ್ಮ ಸಿದ್ದಸ್ಲೋಗನ್ ಅಲ್ಲವೇ?
ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟವನ್ನು ಉಲ್ಲೇಖಿಸಿದ ಎಚ್‌ಡಿಕೆ, ಜನರು ದಯೆ ತೋರಿ ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಅಡ್ನಾಡಿಗಳಂತೆ ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ, ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಈ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯಮೇವ ಜಯತೇ ಎಂಬುದು ನಿಮ್ಮ ಸಿದ್ದಸ್ಲೋಗನ್ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮನೆಹಾಳು ರಾಜಕಾರಣ

ಸಿಎಂ ಸಿದ್ದರಾಮಯ್ಯನವರ ಹಿಂದಿನ ಆಡಳಿತವನ್ನು ನೆನಪಿಸಿದ ಹೆಚ್​​ಡಿಕೆ, ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ, ಆದರೆ ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್ ವಾಶ್ ಮಾಡುವ ಜಾಯಮಾನ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ ಬೇಕು? ನಿಮ್ಮ ಮೊದಲ ಐದು ವರ್ಷದ ಸರ್ಕಾರ ಮತ್ತು ಈಗಿನ ನಿಮ್ಮ ಗುಪ್ತಚರ ಇಲಾಖೆ ರಾಜಕಾರಣವನ್ನು ನಾನು ಕಂಡಿದ್ದೇನೆ ಎಂದಿದ್ದಾರೆ.
ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವಿನ ಸಂಬಂಧದ ಬಗ್ಗೆ ವ್ಯಂಗ್ಯವಾಡಿದ ಕುಮಾರಸ್ವಾಮಿ, ನಿಮ್ಮಿಬ್ಬರ ಕುಚುಕು ಕುಚುಕು ಬಗ್ಗೆ ಜನರಿಗೆ ಗೊತ್ತಿಲ್ಲದ್ದೇನೂ ಇಲ್ಲ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವ ನಿಮ್ಮ ಸ್ನೇಹ ಚಿರಾಯುವಾಗಲಿ. ಮಿಸ್ಟರ್ ಅಗ್ರಿಮೆಂಟ್ ರಾಮಯ್ಯನವರೇ, ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ, ಅಧಿಕಾರ ಬಿಟ್ಟುಕೊಡಿ. ಗುಂಡಿಗೆ ಸಾಲುತ್ತಿಲ್ಲವೇ? ಎಂದು ನೇರ ಸವಾಲು ಎಸೆದಿದ್ದಾರೆ.

ಫೋನ್ ಕದ್ದಾಲಿಕೆ ಮಾಡುವುದು ನನ್ನ ಗುಣವಲ್ಲ

ಫೋನ್ ಕದ್ದಾಲಿಕೆ ಮಾಡುವುದು ನನ್ನ ಗುಣವಲ್ಲ. ಅದು ಕಾಂಗ್ರೆಸ್ ಪಕ್ಷದ್ದೇ ಆವಿಷ್ಕಾರ ಮತ್ತು ನಿಮಗೆ ಬಂದಿರುವ ಸಂಸ್ಕಾರ! ಎಂದು ಲೇವಡಿ ಮಾಡಿರುವ ಎಚ್‌ಡಿಕೆ, ತಮ್ಮ ಮೇಲೆ ಬಂದಿರುವ ಕಳಂಕವನ್ನು ಮುಚ್ಚಿಕೊಳ್ಳಲು ಪ್ರಧಾನಿ ಮೋದಿಯವರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ತಟ್ಟೆಯಲ್ಲಿ ನೊಣ ಕೂತಿರುವಾಗ ಬೇರೆಯವರನ್ನು ಏಕೆ ಎಳೆದು ತರುತ್ತೀರಿ? ಮೊದಲು ನಿಮ್ಮ ತಟ್ಟೆಯನ್ನೊಮ್ಮೆ ನೋಡಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ದೇವೇಗೌಡರನ್ನು ಎಳೆದು ತರುವುದೇಕೆ..?

ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ.
ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದವರು. ಅಂದು ಸಂಸತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರೇ ಮುಕ್ತ ಬೆಂಬಲ ನೀಡುವುದಾಗಿ ಹೇಳಿದರೂ, ತತ್ವ ಸಿದ್ಧಾಂತಕ್ಕಾಗಿ ಆ ಅಧಿಕಾರವನ್ನು ವಿನಯದಿಂದಲೇ ಧಿಕ್ಕರಿಸಿದವರು ಗೌಡರು. ಅವರ ಗರಡಿಯಲ್ಲೇ ಪಳಗಿ, ಅವರಿಂದಲೇ ರಾಜಕೀಯವಾಗಿ ಬೆಳೆದಿರುವ ನಿಮಗೆ ಅಂತಹ ಕೆಚ್ಚು ಇದೆಯೇ?" ಎಂದು ಪ್ರಶ್ನಿಸಿದ ಎಚ್​​ಡಿಕೆ, ನಿಮ್ಮ ಕುಚುಕು ಗೆಳೆಯನ (ಡಿಸಿಎಂ) ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ದೇವೇಗೌಡರಂತೆ ವಿರೋಚಿತ ತ್ಯಾಗ ಪ್ರದರ್ಶಿಸಿ ಅಧಿಕಾರ ಬಿಟ್ಟುಕೊಡಿ ಎಂದು ಕುಟುಕಿದ್ದಾರೆ.

ಸೋತರೆ ಬಾಹುಬಲಿಯಂತೆ ಸೋಲಬೇಕು

ತಮ್ಮ ಪೋಸ್ಟ್‌ನ ಕೊನೆಯಲ್ಲಿ ಭಾವನಾತ್ಮಕ ಮತ್ತು ಖಡಕ್ ಮಾತುಗಳನ್ನಾಡಿದ ಎಚ್‌ಡಿಕೆ, ನಾನು ಅಧಿಕಾರ ಕಳೆದುಕೊಂಡವನು, ಆದರೆ ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ. ಇತಿಹಾಸ ಎಂದಿಗೂ ಮೌನವಾಗಿರುವುದಿಲ್ಲ ಎಂಬುದು ನೆನಪಿರಲಿ. ಸೋತರೆ ಸೋಲಬೇಕು ಬಾಹುಬಲಿಯಂತೆ! ನಾನು ಸೋತಿದ್ದೇನೆ, ಓಡಿ ಹೋಗಿಲ್ಲ ಎಂದು ಕೇಂದ್ರ ಸಚಿವರು ತಮ್ಮ ಮಾತಿಗೆ ವಿರಾಮ ಹೇಳಿದ್ದಾರೆ.