ನೆಲಮಂಗಲದ ಪವಾಡಶ್ರೀ ಬಸವಣ್ಣದೇವರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಶಾಸಕ ಎನ್​.ಶ್ರೀನಿವಾಸ್​ ಸನ್ಮಾನಿಸಿದರು. ಶ್ರೀಸಿದ್ಧಲಿಂಗಸ್ವಾಮೀಜಿ, ಬಿಇಒ ಕೆ.ಸಿ.ರಮೇಶ್​ ಇತರರು ಇದ್ದರು.  
ರಾಜ್ಯ

ಮಕ್ಕಳ ಮೇಲೆ ಒತ್ತಡ ಹಾಕ್ಬೇಡಿ / NELAMANGAL

ನೆಲಮಂಗಲ : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ ಇಲಾಖೆ ಸೇರಿ ಆಯಾ ಶಾಲೆಗಳ ಶಿಕ್ಷಕರ ಕಾರ್ಯ ಪ್ರಶಂಸನೀಯ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಕೇವಲ ಅಭಿವೃದ್ಧಿ ಕಾಮಗಾರಿ, ಸಮಸ್ಯೆಗಳ ಇತ್ಯರ್ಥಗಳಿಗಷ್ಟೇ ಸಮಯ ನೀಡದೆ ಶಾಸಕನಾದಾಗಿಂದಲೂ ಪ್ರತಿವರ್ಷ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳ ಪಠ್ಯಗಳಲ್ಲಿನ ಅನುಮಾನ, ಗೊಂದಲ ಪರಿಹರಿಸುವುದು, ಪರೀೆ ವೇಳೆ ಅನುಸರಿಸಬೇಕಾದ ನಿಯಮಗಳು, ಹೆಚ್ಚಿನ ಫಲಿತಾಂಶ ಕುರಿತಾದ ಕಾರ್ಯಾಗಾರ ಆಯೋಜಿಸುವುದು ಮಾಡಲಾಗಿತ್ತು. ಬೃಹತ್​ ಪ್ರತಿಭಾ ಪುರಸ್ಕಾರ ಆಯೋಜಿಸಿ 4500 ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಲಾಗಿತ್ತು. ಅದರಂತೆ ಹೆಚ್ಚಿನ ಫಲಿತಾಂಶ ಬಂದಿದೆ ಎಂದರು.
ಮಕ್ಕಳ ಮೇಲೆ ಒತ್ತಡ ಹಾಕಬೇಡಿ: ಮಕ್ಕಳ ಮೇಲೆ ಪಾಲಕರಿಗೆ ಕಾಳಜಿ ಇರುತ್ತೆ. ಆದರೆ ಫಲಿತಾಂಶ ಬಂದಕೂಡಲೇ ಇಂಜಿನಿಯರಿಂಗ್​, ವೈದ್ಯಶಿಕ್ಷಣ ಮಾಡು ಎಂದು ಮಕ್ಕಳ ಮೇಲೆ ಒತ್ತಡ ಹಾಕದೆ ಆಸಕ್ತಿಯುತ ವಿಷಯ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಶಾಸಕ ಎನ್​.ಶ್ರೀನಿವಾಸ್​ ಸಲಹೆ ನೀಡಿದರು.
ಬಿಇಒ ರಮೇಶ್​ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಮಂಚನಬೆಲೆಯಲ್ಲಿ ಶಿಕ್ಷಕರಾಗಿದ್ದಾಗ ತನಗೆ ಶಿಕ್ಷಕರಾಗಿದ್ದವರು. ಆ ದಿನಗಳಲ್ಲಿನ ಅವರಲ್ಲಿದ್ದ ಕರ್ತವ್ಯ ನಿಷ್ಠೆ, ಸರ್ಕಾರಿ ಶಾಲೆಗಳ ಕುರಿತಾದ ಕಾಳಜಿ ಬಾಲ್ಯದ ದಿನಗಳಿಂದಲೇ ನೋಡಿದ್ದೇನೆ. ಅವರ ಕಾರ್ಯತತ್ಪರತೆಯಿಂದ ಹಿಂದೆಯೂ ಫಲಿತಾಂಶ ತಂದಿದ್ದರು. ಅದರಂತೆ ಈ ಬಾರಿ ತಾಲೂಕಿಗೂ ಉತ್ತಮ ಫಲಿತಾಂಶ ತಂದುಕೊಟ್ಟಿರುವ ಬಿಇಒ ಮತ್ತವರ ಅಧಿಕಾರಿಗಳ ತಂಡದ ಕಾರ್ಯ ಶ್ಲಾಘನೀಯ ಎಂದು ಶಾಸಕ ಎನ್​.ಶ್ರೀನಿವಾಸ್​ ಮೆಚ್ಚುಗೆ ವ್ಯಕ್ತಪಡಿಸಿದರು.
ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ 48 ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಾರಾಯಣಗೌಡ, ಶಿಕ್ಷಣ ಸಂಯೋಜಕಿ ಸುಚಿತ್ರಾ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ, ಕ್ಷೇತ್ರಸಮನ್ವಯಾಧಿಕಾರಿ ಅನಿತಾ, ತಾಲೂಕು ನೋಡೆಲ್​ ಅಧಿಕಾರಿ ಗಿರೀಶ್​, ಮುಖಂಡ ಕೆ.ಕೆ.ಕೃಷ್ಣಪ್ಪ, ಕೆಂಪರಾಜು, ಹನುಮಂತರಾಜು, ಶೇಖರ್​, ಹನುಮಂತರಾಯಪ್ಪ, ಮುನಿರಾಜು ಇದ್ದರು.
ಹೆಚ್ಚು ಮಕ್ಕಳಿಗೆ ಸನ್ಮಾನ : ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೇ ಶೇ.18 ಗುಣಾತ್ಮಕ ಫಲಿತಾಂಶ ಏರಿಕೆಯಾಗಿದೆ. ಕಳೆದ ಬಾರಿ ಶಾಸಕರು 4500 ವಿದ್ಯಾರ್ಥಿಗಳಿಗೆ ಬೃಹತ್​ ಮಟ್ಟದ ಪ್ರತಿಭಾ ಪುರಸ್ಕಾರ ಮಾಡಿದ್ದು, ಈ ಬಾರಿಯ ಪರೀಕ್ಷೆಗೆ ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು. ತಾಲೂಕಿನ ಬಹುತೇಕ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ. ಪ್ರತಿವರ್ಷದಂತೆ ಈ ಬಾರಿ ಬಿಇಒ ಕಚೇರಿಯಿಂದ ಪ್ರತಿಭಾವಂತ 12 ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸನ್ಮಾನಿಸಲಾಗಿತ್ತು. ಇದೀಗ ಶಾಸಕರ ನಿರ್ದೇಶನದಂತೆ ಹೆಚ್ಚು ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಬಿಇಒ ಕೆ.ಸಿ.ರಮೇಶ್​ ಮಾಹಿತಿ ನೀಡಿದರು.

ಶಾಸಕರು ಕ್ಷೇತ್ರದ ಅಭಿವೃದ್ಧಿಗಷ್ಠೇ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿ ಮಾದರಿಯಾಗಿದ್ದಾರೆ. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ಉತ್ತೇಜನ ನೀಡಿದ್ದರ ಫಲವಾಗಿ ತಾಲೂಕಿಗೆ ಅಧಿಕ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಿಗೆ ಸಾಧನೆಯ ಮೊದಲ ಮೆಟ್ಟಿಲು ಇದಾಗಿದೆ. ಮುಂದಿನ ಶಿಕ್ಷಣದ ಹಂತದಲ್ಲೂ ಉತ್ತಮ ಫಲಿತಾಂಶ ಪಡೆಯಬೇಕು.