ಹನೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ ಉಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒಗಳು.
ಹನೂರು: ಗ್ರಾಮಗಳಿಗೆ ಪ್ರತಿಯೊಬ್ಬರೂ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಇಒ ಉಮೇಶ್ ಪಿಡಿಒಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಿಡಿಒಗಳಿಂದ ಮಾಹಿತಿ ಪಡೆದು ಮಾತನಾಡಿ, 4-5 ತಿಂಗಳಿನಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿತ್ತು. ಖಾಸಗಿ ಪಂಪ್‌ಸೆಟ್ ಹಾಗೂ ಟ್ಯಾಂಕರ್ ಮೂಲಕ ನೀರೊದಗಿಸುವುದು ಸವಾಲಿನ ಕೆಲಸವಾಗಿತ್ತು. ಇತ್ತೀಚೆಗೆ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿರುವುದರ ಪರಿಣಾಮ ನೀರಿನ ಸಮಸ್ಯೆ ಕೊಂಚ ನೀಗಿದೆ. ಕೆಲವು ಗ್ರಾಮಗಳಲ್ಲಿ ಇನ್ನು ಸಹ ನೀರಿನ ಸಮಸ್ಯೆ ಇದೆ ಎಂದು ವಿವರಿಸಿದರು.
ಪ್ರಸ್ತುತ 8 ಗ್ರಾಪಂಗಳ 12 ಗ್ರಾಮಗಳಿಗೆ ಖಾಸಗಿ ಪಂಪ್‌ಸೆಟ್ ಹಾಗೂ 7 ಗ್ರಾಪಂಗಳ 22 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೆರಡು ತಿಂಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಹಾಗೂ ಜನರಿಂದ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಹೆಚ್ಚು ಕಚೇರಿಯಲ್ಲಿ ಕೂರದೇ ಗ್ರಾಮಗಳಿಗೆ ಭೇಟ ನೀಡಿ ತಲೆದೋರುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ನರೇಗಾ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೂ ಮೀನಮೇಷ ಎಣಿಸದೆ ಉದ್ಯೋಗ ನೀಡಬೇಕು ಎಂದು ತಿಳಿಸಿದರು.
ಕೇಂದ್ರ ಸ್ಥಾನದಲ್ಲಿರಿ: ಗ್ರಾಪಂ ಅಧಿಕಾರಿಗಳು ಹಾಗೂ ನೌಕರರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಈಗಾಗಲೇ ಸಭೆ ನಡೆಸಿದ್ದು, ತಿಳಿಸಿರುವ ನಿರ್ದೇಶನವನ್ನು ಎಲ್ಲರೂ ಪಾಲಿಸಬೇಕಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಬೆಳಗ್ಗೆ 10 ಗಂಟೆಗೆ ಕಚೇರಿ ಕರ್ತವ್ಯಕ್ಕೆ ಹಾಜರಾಗಬೇಕು. ಪ್ರತಿ ಗ್ರಾಪಂ ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ದುರಸ್ತಿಗೊಂಡಿರುವ ಸಿಸಿ ಕ್ಯಾಮರಾವನ್ನು ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ, ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಕಚೇರಿಯಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂಬುದಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಹಾಗೂ ಪ್ರತಿಯೊಬ್ಬರೂ ಕೇಂದ್ರ ಸ್ಥಾನದಲ್ಲಿದ್ದು, ಈ ಬಗ್ಗೆ ಮೂರು ದಿನಗಳೊಳಗೆ ತಾಪಂ ಕಚೇರಿಗೆ ವರದಿ ಸಲ್ಲಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
ಇದೇ ವೇಳೆ ಅಜ್ಜೀಪುರ, ಕುರಟ್ಟಿ ಹೊಸೂರು, ಎಲ್ಲೇಮಾಳ, ಪಿ.ಜಿ ಪಾಳ್ಯ, ಬೈಲೂರು, ಲೊಕ್ಕನಹಳ್ಳಿ, ಹುತ್ತೂರು ಹಾಗೂ ಶೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸುವ ಸಂಬಂಧ ದೊರಕುವ ನಿವೇಶನದ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಪಿಡಿಒಗಳಾದ ರಾಮು, ಸುರೇಶ್, ಶಿವಣ್ಣ, ಗಂಗಾಧರ್, ಸೆಲ್ವರಾಜ್, ನಂಜುಂಡಸ್ವಾಮಿ, ಮಾದೇಶ್, ಆಕಾಶ್, ದೊರೆಯಾ ಇತರರು ಇದ್ದರು.