ದೊಡ್ಡಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಹಮ್ಮಿಕೊಂಡಿದ್ದ ತೆರೆದ ಮನೆ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಇನ್​ಸ್ಪೆಕ್ಟರ್​ ನವೀನ್​ ಕುಮಾರ್​ ಮಾಹಿತಿ ನೀಡಿದರು. ಪಿಎಸ್​ಐ ಪಂಕಜಾ, ಶುಭಾ, ಶಾಲೆಯ ಶಿಕ್ಷಕ ಸ್ವಾಮಿ ಇದ್ದರು. 
ರಾಜ್ಯ

ಹದಿಹರೆಯದ ವಯಸ್ಸಲ್ಲಿ ಭಾವೋದ್ವೇಗಕ್ಕೆ ಒಳಗಾಗಬೇಡಿ / DODDABALLAPUR

ದೊಡ್ಡಬಳ್ಳಾಪುರ : ಹೆಣ್ಣು ಮಕ್ಕಳು ಎಸ್ಸೆಸ್ಸೆಲ್ಸಿಗೆ ಬಂದಾಗ ಮಾನಸಿಕ, ದೈಹಿಕವಾಗಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಮಹಿಳಾ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಎಂ.ಬಿ.ನವೀನ್​ ಕುಮಾರ್​ ಹೇಳಿದರು.
ನಗರದ ಮಹಿಳಾ ಪೊಲೀಸ್​ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರಳುಮಲ್ಲಿಗೆ ಸರ್ಕಾರಿ ಫ್ರೌಢಶಾಲೆಯ ಮಕ್ಕಳಿಗೆ ತಿಳಿ ಹೇಳಿದ ಅವರು, ವಿದ್ಯಾರ್ಥಿ ದೆಸೆಯಲ್ಲಿ ಒಂದು ತಪ್ಪು ಹೆಜ್ಜೆಇಟ್ಟರೆ, ಇಡೀ ಜೀವನದ ದಾರಿಯೇ ತಪ್ಪುತ್ತದೆ. ಮಕ್ಕಳು ಶಿಕ್ಷಣ ಪೂರೈಸುವವರೆಗೂ ಪಾಲಕರು ಕಡ್ಡಾಯವಾಗಿ ಓದಿಸಲೇಬೇಕು. ಸಾಮಾಜಿಕ ಜಾಲತಾಣದಿಂದ ಯುವ ಜನತೆ ಹಾಳಾಗುತ್ತಿದ್ದಾರೆ.
ಕಳೆದ ವರ್ಷ ಮಹಿಳಾ ಠಾಣೆಯಲ್ಲಿ 18 ಫೋಕ್ಸೋ ಕೇಸ್​ ದಾಖಲಾಗಿದ್ದರೆ. ಈ ವರ್ಷ 35 ಫೋಕ್ಸೋ ಕೇಸ್​ ದಾಖಲಾಗಿದೆ. ಈ ವರ್ಷ ನಾಪತ್ತೆಯಾದ 135 ಪ್ರಕರಣಗಳು ದಾಖಲಾಗಿವೆ. ಇದಕ್ಕೆಲ್ಲಾ ಕಾರಣ ಅತಿಯಾದ ಮೊಬೈಲ್​ ಬಳಕೆ. ಒಳ್ಳೆಯ ಉದ್ದೇಶಕ್ಕೆ ಮಾತ್ರ ಮೊಬೈಲ್​ ಬಳಸಿ, ಇಲ್ಲವಾದಲ್ಲಿ ಬೇಡ. ಮಾದಕ ವಸ್ತುಗಳು ಜೀವನ ಮಾತ್ರವಲ್ಲ ಆರೋಗ್ಯವನ್ನೂ ಹಾಳು ಮಾಡುತ್ತದೆ ಎಂದರು. ಮಕ್ಕಳಿಗೆ ಸ್ಥಳದಲ್ಲಿಯೇ ಪ್ರಶ್ನೆಗಳನ್ನು ಕೇಳಿ ಬಹುಮಾನವಾಗಿ ಪುಸ್ತಕ ವಿತರಿಸಿದರು.