ರಂಗಭೂಮಿ ಕಲಾವಿದೆ ಡಾ. ಬಿ. ಜಯಶ್ರೀ
ಬೆಂಗಳೂರು: ಪ್ರಸ್ತುತ ಕಾಲಘಟ್ಟದಲ್ಲಿ ಜೀವಂತಿಕೆ ಉಳಿಸಿಕೊಂಡಿರುವ ಕಲೆ ಎಂದರೆ ರಂಗಭೂಮಿ ಒಂದೇ. ಅದರ ಮೇಲೆ ತಂತ್ರಜ್ಞಾನಗಳ ಪ್ರಯೋಗ ಮಾಡಬೇಡಿ. ಬದಲಿಗೆ ನಿಮ್ಮ ಕ್ರಿಯಾಶಿಲತೆಯನ್ನು ಬಳಸಿ ಎಂದು ಹಿರಿಯ ರಂಗಭೂಮಿ ಕಲಾವಿದೆ ಡಾ. ಬಿ. ಜಯಶ್ರೀ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ಭವನದ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ -243ನೇ ಸಂಚಿಕೆಯಲ್ಲಿ ತಿಂಗಳ ಅತಿಥಿಯಾಗಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಾಟಕಗಳಲ್ಲಿ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಆದರೆ ಪ್ರಯೋಗವೇ ಒಂದಿರುತ್ತದೆ. ಅಲ್ಲಿ ತೋರಿಸುವುದೇ ಒಂದಿರುತ್ತದೆ. ಹೀಗೆ ತಂತ್ರಜ್ಞಾನದ ಮೊರೆ ಹೋಗಿ ನಿಮ್ಮಲಿರುವ ಕಲೆ ಮತ್ತು ಶಕ್ತಿಯನ್ನು ಸಾಯಿಸಬೇಡಿ ಎಂದು ಹೇಳಿದರೆ ಇಂದಿನವರು ಕೇಳುವುದಿಲ್ಲ. ಹಾಗಾಗಿ ಯುವಜನರಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ, ಅದನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಅವರೂ ಇಲ್ಲ. ಈಗ ಏನಿದ್ದರೂ ಮೊಬೈಲ್ ಪ್ರಪಂಚದಲ್ಲಿ ಸಾಕಷ್ಟು ತಲ್ಲೀನರಾಗಿರುವ ಅವರಿಗೆ ಎಲ್ಲವೂ ಮೊಬೈಲ್ ಆಗಿದ್ದು, ಸಂಬಂಧಗಳನ್ನು ಕಳೆದುಕೊಂಡಿದ್ದಾರೆ ಎಂದರು.
ಜೀವಂತ ಕಲೆ ರಂಗಭೂಮಿ:
ನಾಟಕ ಕಲೆ ಎನ್ನುವುದು ಮನುಷ್ಯನನ್ನಾಗಿ ಮಾಡುತ್ತದೆ, ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಸಮಾಜದಲ್ಲಿ ಬದುಕುವ ಮಾರ್ಗ ತೋರಿಸುತ್ತದೆ. ಅದು ಬಹಳ ಮಹತ್ತರವಾದದ್ದು, ಹಾಗಾಗಿ ಇತರೆ ಮಾಧ್ಯಮಗಳಿಗೆ ಹೋಲಿಸಿದರೆ ರಂಗಭೂಮಿ ಇಂದಿಗೂ ಜೀವಂತ ಕಲೆಯಾಗಿ ಉಳಿದಿದೆ ಎಂದು ಜಯಶ್ರೀ ಹೇಳಿದರು.
ವೇದಿಕೆಯಲ್ಲಿ ಚಿತ್ರಗೀತೆ ಹಾಡುವುದಿಲ್ಲ:
ವೇದಿಕೆಯ ಮೇಲೆ ನಾನು ಎಂದಿಗೂ ಚಲನಚಿತ್ರ ಗೀತೆಗಳನ್ನು ಹಾಡುವುದಿಲ್ಲ. ನನಗೆ ಹಾಡಬಾರದು ಎಂದೇನಿಲ್ಲ. ಆದರೆ ಕಲಾವಿದೆಯಾಗಿ ನಾನು ಹಾಡುವುದು ರಂಗ ಗೀತೆಗಳನ್ನು ಮಾತ್ರ. ಚಿತ್ರಗೀತೆಗಳ ಪರಿಸರವೇ ಬೇರೆ. ರಂಗಗೀತೆ ಶ್ರೀಮಂತವಲ್ಲ, ಆದರೆ ಹಾಡು ಬಹಳ ಶ್ರೀಮಂತಿಕೆಯಾದದ್ದು, ಅದರಲ್ಲಿ ಕೇವಲ ಒಂದು ಡೋಲಕ್, ದಮಡಿ, ಏಕತಾನ ಕಾಣಬಹುದು. ಆದರೆ ಅದರ ಗತ್ತೇ ಬೇರೆ. ಸಿನಿಮಾ ಗೀತೆ ಹಾಡಿದರೆ ಯಾರೂ ಅದರ ಸಾಹಿತ್ಯ ಗಮನಿಸುವುದಿಲ್ಲ. ಬದಲಿಗೆ ಕಲ್ಪನಾಲೋಕದಲ್ಲಿ ಇರುತ್ತಾರೆ. ಅದು ಚಿತ್ರಗೀತೆ. ಆದರೆ ರಂಗಗೀತೆ ಹೃದಯಕ್ಕೆ ತಲುಪುವ ಗೀತೆ. ಹಾಗಾಗಿ ವೇದಿಕೆಯಲ್ಲಿ ಕೇವಲ ರಂಗ ಗೀತೆಗಳನ್ನು ಮಾತ್ರವೇ ಹಾಡುವುದು ಎಂದರು.
ಮಂದಿರಕ್ಕಲ್ಲ ಮಕ್ಕಳಿಗೆ ಮಾಡಿದೆ
ರಾಜ್ಯಸಭೆ ಸದಸ್ಯೆಯಾಗಿ ಬಹಳ ಒಳ್ಳೆಯ ಅನುಭವ. ಅಲ್ಲಿ ಯಾರೂ ಆತ್ಮೀಯರಲ್ಲ. ಯಾರೂ ಶತ್ರುಗಳಲ್ಲ. ಇಡೀ ಭಾರತವೇ ನನ್ನದಾಗಿತ್ತು. ಆಗ ನನಗೆ ಬಂದ ಎಂಪಿ ನಿಧಿಯಿಂದ ಬಹಳಷ್ಟು ಒಳ್ಳೆಯ ಕೆಲಸಗಳಿಗೆ ನೆರವು ನೀಡಿದ್ದೇನೆ. ರಸ್ತೆ, ಚರಂಡಿ ಕಾಮಗಾರಿಗೆ, ಸಮುದಾಯ ಭವನಗಳಿಗೆ, ಮಂದಿರಗಳಿಗೆ ನೀಡಲಿಲ್ಲ. ಬದಲಿಗೆ ಶಾಲೆಗಳಿಗೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ನೀಡಿದ್ದೇನೆ. ಆ ಸಂದರ್ಭದಲ್ಲಿ ಕವಿಗಳ ಊರಿನ ಅಭಿವೃದ್ಧಿಗೆ ಸಂಸದರ ಸಹಕಾರ ಕೋರಿದರೂ, ಯಾರೊಬ್ಬರೂ ಸಹಕರಿಸಲಿಲ್ಲ ಎಂದು ಬಿ. ಜಯಶ್ರೀ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎಂ. ಗಾಯತ್ರಿ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಇತರರು ಇದ್ದರು.