South Western Railway garbage dumping action 
ರಾಜ್ಯ

ರೈಲ್ವೆ ಹಳಿಗಳ ಪಕ್ಕ ಕಸ, ತ್ಯಾಜ್ಯ ಸುರಿದರೆ ಕಠಿಣ ಕ್ರಮ ಹಾಗೂ ದಂಡ: ನೈರುತ್ಯ ರೈಲ್ವೆ ಎಚ್ಚರಿಕೆ!..South Western Railway

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಜಾಗದಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ದಂಡ.
  • ಬೆಂಗಳೂರಿನ ರೈಲ್ವೆ ಹಳಿಗಳ ಪಕ್ಕದ ತ್ಯಾಜ್ಯವನ್ನು ಮುಂದಿನ ಎರಡು ತಿಂಗಳಲ್ಲಿ ತೆರವುಗೊಳಿಸಲು ಅಭಿಯಾನ.
  • ನಿರಂತರ ಕಸ ಮತ್ತು ತ್ಯಾಜ್ಯ ಸುರಿಯುವುದರಿಂದ ರೈಲ್ವೆ ಜಾಗ ಒತ್ತುವರಿಯಾಗುವ ಅಪಾಯ.
ಬೆಂಗಳೂರು: ರೈಲ್ವೆ ಜಾಗದಲ್ಲಿ  ಕಸ ಅಥವಾ ನಿರ್ಮಾಣ ಹಂತದ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲು  ನೈರುತ್ಯ ರೈಲ್ವೆ ಇಲಾಖೆ ಮುಂದಾಗಿದೆ. ಗ್ರೇಟರ್​ ಬೆಂಗಳೂರು ಪ್ರಾಧೀಕಾರ  ಮತ್ತು ನಗರದ ಐದು ಪಾಲಿಕೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಮುಂದಿನ ಎರಡು ತಿಂಗಳೊಳಗೆ ತೆರವುಗೊಳಿಸಲು ಬೃಹತ್ ಅಭಿಯಾನವೊಂದನ್ನು ಆರಂಭಿಸಲಾಗಿದೆ.

ಸೋಮಣ್ಣ ಹೇಳಿದ್ದೇನು?

ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಅವರು ಮಾತನಾಡಿ, ರೈಲ್ವೆ ಜಾಗದಲ್ಲಿ ಕಸ ಸುರಿಯುವುದನ್ನು ತಡೆಯಲು ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸಲಾಗುವುದು. ಈಗಾಗಲೇ ಬಿದ್ದಿರುವ ಕಸವನ್ನು ತೆರವುಗೊಳಿಸುವುದು ಮತ್ತು ಕಟ್ಟುನಿಟ್ಟಿನ ಜಾರಿಯ ಮೂಲಕ ಹೊಸದಾಗಿ ಕಸ ಸುರಿಯುವುದನ್ನು ತಡೆಯುವುದೇ ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು  ವಿ ಸೋಮಣ್ಣ ಹೇಳಿದರು
ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿಂದು ರೈಲ್ವೆ ಭೂಮಿ ಹಾಗೂ ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲಾಯಿತು ಎಂದು ಎಕ್ಸ್​ನಲ್ಲಿ ವಿ ಸೋಮಣ್ಣ ಬರೆದುಕೊಂಡಿದ್ದಾರೆ.

ಅಧಿಕಾರಿಗಳು ಏನಂದ್ರು?

ರೈಲ್ವೆ ಹಳಿಗಳ ಪಕ್ಕದಲ್ಲಿ ಕಸ ಸುರಿಯುತ್ತಿರುವ ಬಗ್ಗೆ   ಅಸಮಾಧಾನ ವ್ಯಕ್ತಪಡಿಸಿದ  ರೈಲ್ವೆ ಅಧಿಕಾರಿಗಳು , ಕಸದ ರಾಶಿ ಒಂದೇ ಕಡೆ ಇರುವುದರಿಂದ ಬೆಂಕಿ ಅವಘಡದಂತಹ ಪ್ರಕರಣಗಳು ಸಂಭವಿಸಿದೆ. ಇದರಿಂದಾಗಿ  ಸಿಗ್ನಲಿಂಗ್ ಮತ್ತು ವಿದ್ಯುತ್ ಕೇಬಲ್‌ಗಳಿಗೆ ಹಾನಿ ಮಾಡಿದ್ದು, ರೈಲು ಸಂಚಾರಕ್ಕೆ ಅಡಚಣೆಯನ್ನುಂಟುಮಾಡಿವೆ ಎಂದು ಮಾಹಿತಿ ಹಂಚಿಕೊಂಡರು. 
ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೊಸೂರು ಮಾರ್ಗಗಳು ಸೇರಿದಂತೆ ಪ್ರಮುಖ ರೈಲ್ವೆ ಕಾರಿಡಾರ್‌ಗಳ ಅಕ್ಕಪಕ್ಕದಲ್ಲಿ ಹಲವಾರು ಸ್ಥಳಗಳಲ್ಲಿ ಕಸ ಮತ್ತು ತ್ಯಾಜ್ಯಗಳು ಶೇಖರಣೆಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಒಮ್ಮೆ ತ್ಯಾಜ್ಯವನ್ನು ಪದೇ ಪದೇ ಸುರಿದರೆ, ಅದು ರೈಲ್ವೆ ಜಾಗ ಮತ್ತು ಪಕ್ಕದ ಆಸ್ತಿಗಳ ನಡುವಿನ ಗಡಿಯನ್ನು ಸವೆಸುತ್ತದೆ, ಅಂತಿಮವಾಗಿ ಇದು ರೈಲ್ವೆ ಭೂ ಒತ್ತುವರಿಗೆ ದಾರಿ ಮಾಡಿಕೊಡುತ್ತದೆ" ಎಂದು ಆ ಅಧಿಕಾರಿ ಹೇಳಿದರು, (ಏಜೆನ್ಸೀಸ್).