ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಶ್ ಕುಟುಂಬಕ್ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ
- ಶಾಸಕ ಕೆ.ಎಂ.ಉದಯ್
- ಕಾರ್ಕಹಳ್ಳಿ
ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಕುಟುಂಬದೊಂದಿಗೆ ಇದ್ದು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.
ಸಮೀಪದ ಕಾರ್ಕಹಳ್ಳಿಯಲ್ಲಿ ಇತ್ತೀಚೆಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಶ್ ಕುಟುಂಬಕ್ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದರು. ಸಾಲ ಮತ್ತು ಸಮಸ್ಯೆಗಳಿಗೆ ಸಾವು ಪರಿಹಾರವಲ್ಲ ಎಂದರು.
ಮೃತ ರೈತ ರಾಜೇಶ್ ಪತ್ನಿಯೊಂದಿಗೆ ಚರ್ಚಿಸಿದ ಶಾಸಕರು, ಕುಟುಂಬದ ಪರಿಸ್ಥಿತಿ ಹಾಗೂ ಆತ್ಮಹತ್ಯೆಗೆ ಕಾರಣಗಳ ಕುರಿತು ಮಾಹಿತಿ ಪಡೆದು ಧೈರ್ಯ ತುಂಬಿದರಲ್ಲದೆ, ಕುಟುಂಬಕ್ಕೆ ಸರ್ಕಾರದ ವತಿಯಿಂದ ದೊರೆಯಬೇಕಾದ ಪರಿಹಾರವನ್ನು ಶೀಘ್ರ ತಲುಪಿಸಲಾಗುವುದು ಎಂದರು.
ಈ ವೇಳೆ ಸಚಿನ್, ರಾಜೇಶ್, ಪ್ರದೀಪ, ಮಾದೇಗೌಡ, ನಂದೀಶ, ಮಿಣಕೇಗೌಡ ಇದ್ದರು.