ಶಿವಪುರ ಗ್ರಾಮಸ್ಥರು ಪ್ರತಿಭಟನೆ Protest
- ವಿವಿಧ ಸಂಟನೆಗಳಿಂದ ಶ್ರೀನಿವಾಸಪುರದಲ್ಲಿ ಪ್ರತಿಭಟನೆ
- ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ
ಶ್ರೀನಿವಾಸಪುರ: ಜಂಟಿ ಸರ್ವೇ ಕಾರ್ಯ ಮುಗಿಯುವವರೆಗೂ Protest ರೈತರ ಕೃಷಿ ಭೂಮಿ ತಂಟೆಗೆ ಅರಣ್ಯ ಇಲಾಖೆ ಬರಬಾರದು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ, ಹಸಿರುಸೇನೆ, ದಲಿತ ಸಂಘರ್ಷ ಸಮಿತಿ, ಸಿಪಿಎಂ ಪಕ್ಷ, ಮಾವು ಬೆಳೆಗಾರರು ಹಾಗೂ ಶಿವಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿಯ ವೇಣು ಶಾಲೆ ವೃತ್ತದಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕೆಪಿಆರ್ಎಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶ್ವಂತ್ ಮಾತನಾಡಿ, ಜೈಲಿಗೆ ಹಾಕಿದರೂ ಸಿದ್ಧವಾಗಿದ್ದೇವೆ, ಲಾಠಿ ಚಾರ್ಜ್, ಪ್ರಕರಣಗಳಿಗೆ ಬೆದರುವುದಿಲ್ಲ. ಪ್ರಾಣ ಬಿಡುತ್ತೇವೆ ವಿನಾ ಭೂಮಿ ಬಿಡುವುದಿಲ್ಲ.
ರೈತರಿಗೆ ಸರ್ಕಾರ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಿದ್ದರಿಂದ ಬೆಳೆ ಬೆಳೆದು ಕೃಷಿ ಮಾಡಿಕೊಂಡು ಜೀವನ ಸಾಗಿಸಲಾಗುತ್ತಿದೆ. ಮಾವು ಬೆಳೆಯುತ್ತಿರುವ ಜಮೀನುಗಳಿಗೆ ನೀವು ಒತ್ತುವರಿ ತೆರವು ಹೆಸರಿನಲ್ಲಿ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಇತ್ತೀಚಿಗೆ ಸರ್ವೊಚ್ಚ ನ್ಯಾಯಲಯ ಎಸ್ಐಟಿ ತನಿಖಾ ತಂಡ ನೇಮಕ ಮಾಡಿದೆ. ಜಂಟಿ ಸರ್ವೇ ಆಗುವವರೆಗೂ ರೈತರ ತಂಟೆಗೆ ಬರಬಾರದು ಎಂದು ಎಚ್ಚರಿಕೆ ನೀಡಿದರು.
ದಲಿತ ಮಹಿಳಾ ನಾಯಕಿ ರಾಮಾಂಜಮ್ಮ ಮಾತನಾಡಿ, ಸುಮಾರು 40-&50 ವರ್ಷದಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳ ಬೆಳೆಗಳನ್ನು ನಾಶಪಡಿಸುವುದರ ಜತೆಗೆ ಗಡಿ ಗೊತ್ತುಪಡಿಸುತ್ತಿರುವುದು ವಿಷಾದನೀಯ. ಸರ್ಕಾರದ ಆದೇಶ ಗಾಳಿಗೆ ತೂರಿ ದಬ್ಬಾಳಿಕೆ ಮಾಡುವುದು ಸಹಿಸುವುದಿಲ್ಲ. ಬೇಡಿಕೆ ಈಡೇರದಿದ್ದಲ್ಲಿ ಅರ್ನಿಧಿಷ್ಟಾವಧಿ ಧರಣಿಗೆ ಮುಂದಾಗುತ್ತೇವೆ ಎಂದರು.
ಮಾವು ಬೆಳೆಗಾರರ ಸಂದ ಜಿಲ್ಲಾಧ್ಯಕ್ಷ ಚಿನ್ನಪ್ಪರೆಡ್ಡಿ ಮಾತನಾಡಿ, ದೊಡಮಲದೊಡ್ಡಿ ರೈತರ ಭೂಮಿ ತೆರವುಗೊಳಿಸುವ ಸಮಯದಲ್ಲಿ ಅರಣ್ಯ ಇಲಾಖೆಯವರು ಮತ್ತು ರೈತರ ಮಧ್ಯೆ ಘರ್ಷಣೆಯಾಗಿದೆ. ಪೊಲೀಸ್ ಇಲಾಖೆ ಜವಾಬ್ದಾರಿ ಇಲ್ಲವೆ?, ಕೇವಲ ಅರಣ್ಯ ಇಲಾಖೆ ಸಿಬ್ಬಂದಿ ನೀಡಿರುವ ದೂರಿನ ಮೇರೆಗೆ ರೈತರ ಮೇಲೆ ಪ್ರಕರಣ ದಾಖಲಿಸುವುದು ದುರದೃಷ್ಟಕರ. ಅರಣ್ಯ ಇಲಾಖೆ ಸಿಬ್ಬಂದಿ ಮೇಲೇಕೆ ನೀವು ಪ್ರಕರಣ ದಾಖಲು ಮಾಡಬಾರದು?, ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ?, ಕೂಡಲೇ ರೈತರ ಮೇಲೆ ಹಾಕಿರುವ ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಜಂಟಿ ಸರ್ವೇ ಆಗುವವರೆಗೂ ತಲೆ ಹಾಕಲ್ಲ
ಪ್ರತಿಭಟನಾ ಸ್ಥಳಕ್ಕೆ ಬಂಗಾರಪೇಟೆ ಎಸಿಎ್ ಗಿರೀಶ್ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಈ ಕ್ಷಣದಿಂದ ಜಂಟಿ ಸರ್ವೇ ಆಗುವ ತನಕ ಇಲಾಖೆ ಅಧಿಕಾರಿಗಳು ರೈತರ ಜಮೀನು ತಂಟೆಗೆ ಬರುವುದಿಲ್ಲ. ನಿಮ್ಮ ಬೇಡಿಕೆಗೆ ಸಂಬಂಧಿಸಿದ ಮೇಲಾಧಿಕಾರಿಗಳ ಜತೆಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಈವೇಳೆ ಉಪರಣ್ಯಾಧಿಕಾರಿಗಳಾದ ಶ್ರೀನಾಥ್, ಅನಿಲ್ ಕುಮಾರ್, ಕೃಷ್ಣಮೂರ್ತಿ, ಸಿಪಿಐ ಮಹಮದ್ ಗೊರವನಕೊಳ್ಳ, ಪಿಎಸ್ಐ ಜಯರಾಮ್ ಇದ್ದರು.
ಕೆ.ಆರ್. ರಮೇಶ್ ಕುಮಾರ್ ಅಭಯ
ಇತ್ತೀಚಿಗೆ ಶಿವಪುರ ಗ್ರಾಮಸ್ಥರು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ರಮೇಶ್ ಕುಮಾರ್ ಅವರು, ಮೊದಲು ನನ್ನ ಮೇಲೆ ಬುಲ್ಡೋಜರ್ ಹತ್ತಿಸಲಿ, ನಂತರ ಶಿವಪುರಕ್ಕೆ ಬರಲಿ ನೋಡೋಣ. ನೀವು ದೈರ್ಯವಾಗಿ ಗ್ರಾಮಕ್ಕೆ ತೆರಳಿ ಎಂದು ಅಭಯ ನೀಡಿದರು.
ಪುರಸಭೆ ನಾಮಿನಿ ಸದಸ್ಯ ನರಸಿಂಹಮೂರ್ತಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಸು, ಹೂಹಳ್ಳಿ ಕೃಷ್ಣಪ್ಪ, ಸಿಪಿಎಂನ ಸಯ್ಯದ್ ಫಾರೂಖ್, ಶಿವರಾಜ್, ಗೂಕುಂಟೆ ಗಂಗುಲಪ್ಪ, ಶಿವಪುರ ಟಿ.ಗಣೇಶ್, ಎಸ್.ಜಿ.ವಿ. ವೆಂಕಟೇಶ್, ಟಿ.ಶಂಕರಪ್ಪ, ಗುರ್ರಪ್ಪ, ಸಲ್ಲಾಪುರಿ ಮುರಳಿ, ಉಪ್ಪರಪಲ್ಲಿ ಚಲಪತಿ, ರಮೇಶ್ ಇದ್ದರು.