ಹುಣಸೂರು ತಾಲುಕು ಹೈರಿಗೆ ಗ್ರಾಮದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ರೈತ ಮಹಿಳೆಯರಿಗೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಸಹಾಯಕ ವ್ಯವಸ್ಥಾಪಕ ಕೆ.ರಾಜು ಪ್ರಮಾಣಪತ್ರ ವಿತರಿಸಿದರು.
ಹುಣಸೂರು: ಮನೆಯಲ್ಲಿ ಹಸುಗಳ ಪಾಲನೆಯು ನಿಮ್ಮ ಮಗುವಿನ ಆರೈಕೆಯಷ್ಟೇ ಮುಗ್ಧವಾಗಿ, ಕರುಣಾಪೂರ್ವಕವಾಗಿರಲಿ ಎಂದು ಸಂಪನ್ಮೂಲ ವ್ಯಕ್ತಿ ಮಂಜುನಾಥ್ ತಿಳಿಸಿದರು.
ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ಪಶುಸಂಗೋಪನೆ ಇಲಾಖೆ ಹಾಗೂ ಟೈಟಾನ್ ಲೀಪ್ ಸಹಯೋಗದಲ್ಲಿ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾಲ ಹಸು ಸಾಕಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸು ತಾಯಿ ಸಮಾನ ಎಂದು ತಿಳಿಯುವುದು ನಮ್ಮ ನೆಲದ ನಂಬಿಕೆ. 108 ದೇವರುಗಳ ಆವಾಸಸ್ಥಾನವೆಂದು ನಂಬಿರುವ ನಾವು ಹಸುವಿನ ಆರೈಕೆಯಲ್ಲಿ ಬೇಜವಾಬ್ದಾರಿ ತೋರಬಾರದು. ಹಸುಗಳ ಪೋಷಣೆ, ಸಮತೋಲನ ಆಹಾರ, ಮೇವಿನ ನಿರ್ವಹಣೆ ಹಾಗೂ ಹಸುಗಳಿಗೆ ನೀಡಬಹುದಾದ ಮನೆಮದ್ದುಗಳ ಕುರಿತು ತಲೆಮಾರುಗಳಿಂದ ಅರಿತುಕೊಂಡಿದ್ದೇವೆ. ಅದರೊಂದಿಗೆ ಆಧುನಿಕ ಜಗತ್ತಿನ ಅನುಕೂಲಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಹಸು ಸಾಕಣೆ ನಮ್ಮ ಕುಟುಂಬದ ಆದಾಯದ ಮೂಲ ಆಸ್ತಿಯಾಗಲು ಸಾಧ್ಯ ಎಂದು ಹೇಳಿದರು.
ಡಾ.ರುದ್ರಪ್ಪ ಮಾತನಾಡಿ, ಹಸುಗಳ ಗುರುತಿಸುವಿಕೆ, ಕೊಟ್ಟಿಗೆ ಪದ್ಧತಿ ಹಾಗೂ ಮೇವುಗಳ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಪ್ಲೇಸ್‌ಮೆಂಟ್ ವ್ಯವಸ್ಥಾಪಕ ರವಿಕುಮಾರ್ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳು ಪಿಎಂಇಜಿಪಿ, ಎನ್‌ಎಲ್‌ಪಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಭಾನುವಾರ ಕಲಿಕಾ ಪ್ರವಾಸದ ಅಂಗವಾಗಿ ರೈತರನ್ನು ಚಿಕ್ಕಕೆರೆ ಗ್ರಾಮದ ಆನಂದ್ ಅವರ ಫಾರ್ಮ್‌ಗೆ ಭೇಟಿ ನೀಡಿ ಕೊಟ್ಟಿಗೆ ನಿರ್ಮಾಣದ ವಿಧಾನ, ಹಸುಗಳ ನಿರ್ವಹಣೆ ಹಾಗೂ ಹಸುಗಳಿಗೆ ರೋಗ ಬಂದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಮೆಗಾ ಡೇರಿಗೆ ಮತ್ತು ಮೈಮುಲ್ ಕೇಂದ್ರಕ್ಕೆ ಭೇಟಿ ನೀಡಿ ಮೇವಿನ ವಿಧಾನ, ತಳಿಗಳು ಹಾಗೂ ಅದನ್ನು ಬಳಸುವ ವಿಧಾನಗಳನ್ನು ಮೈಮುಲ್ ವ್ಯವಸ್ಥಾಪಕ ಪ್ರಭು ಶಂಕರ್ ಅವರಿಂದ ರೈತರು ಪಡೆದರು. ತರಬೇತಿ ಕಾರ್ಯಕ್ರಮದಲ್ಲಿ ಹೈರಿಗೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ದೇವರಾಜು, ಕೆಎಂಎಫ್‌ನ ವಿಸ್ತರಣಾಧಿಕಾರಿ ಗೌತಮ್, ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಸಹಾಯಕ ವ್ಯವಸ್ಥಾಪಕ ಕೆ.ರಾಜ ಉಪಸ್ಥಿತರಿದ್ದರು. ತರಬೇತಿ ಪೂರ್ಣಗೊಳಿಸಿದ 31 ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.